ಉಡುಪಿ: ಸರ್ಕಾರದ ವಿವಿಧ ಸವಲತ್ತು ರೈತರಿಗೆ ಸಿಗಬೇಕಾ..? ಕೂಡಲೇ ಈ ಕೆಲಸ ಮಾಡಿ …

ಉಡುಪಿ ಅ.19(ಉಡುಪಿ ಟೈಮ್ಸ್ ವರದಿ): ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಹಕಾರಿ ಯಾಗುವಂತೆ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸುವ ಸಲುವಾಗಿ ಆರಂಭ ಗೊಂಡಿರುವ ಫ್ರೂಟ್ಸ್ ಆ್ಯಪ್ ಕೆಲವೇ ದಿನಗಳಲ್ಲಿ ಮಾಹಿತಿ ನೋಂದಣಿಯಲ್ಲಿ 48.55ಶೇ. ಪ್ರಗತಿ ಸಾಧಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು, ರೈತರ ಜಮೀನಿನ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಫ್ರೂಟ್ಸ್ (FRUITS – Farmers Registration & Unified Beneficiary Information System) ತಂತ್ರಾಂಶವನ್ನು ಬಳಸಲಾಗುತ್ತಿರುವುದರಿಂದ ಈ ತಂತ್ರಾಂಶದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಸರ್ಕಾರದಿಂದ ಈಗಾಗಲೇ ನಿರ್ದೇಶನವನ್ನು ನೀಡಲಾಗಿದೆ. 

ಜಿಲ್ಲೆಯಲ್ಲಿ ಫ್ರೂಟ್ಸ್ ತಂತ್ರಾಂಶದಡಿ  ಅ.6 ರಿಂದ 17 ರ ವರೆಗೆ 1,07,245 ಜಾಗದ ಪ್ಲಾಟ್‌ಗಳು ನೋಂದಣಿಯಾಗಿದ್ದು, ಜಿಲ್ಲೆಯು ಈ ವರೆಗೆ 48.55ಶೇ. ಪ್ರಗತಿ ಸಾಧಿಸಿದೆ. ಹೆಚ್ಚಿನ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನನ್ನು ನೋಂದಣಿ ಮಾಡಿಸಲು ಉತ್ತಮ ರೀತಿಯಲ್ಲಿ ಸ್ಪಂದಿಸಿ ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆಯಲು ಸಹಕರಿಸಿದ್ದು, ಇನ್ನೂ ಹೆಚ್ಚಿನ ರೈತರು ತಮ್ಮ ಜಮೀನನ್ನು ನೋಂದಣಿ ಮಾಡಿಸಲು ಬಾಕಿಯಿದೆ. ಈ ಮಾಹಿತಿಯನ್ನು ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಕೆ ಮಾಡುವುದರಿಂದ ರೈತರು ನಿರ್ಭೀತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ಕೂಡಲೇ ನೋಂದಾಯಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಆದುದರಿಂದ ಸಮಸ್ತ ರೈತರು ತಮ್ಮ ಆಧಾರ್‌ ಕಾರ್ಡ್‌ ಪ್ರತಿ ಹಾಗೂ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರರ ಕಛೇರಿ/ ಕಂದಾಯ ನಿರೀಕ್ಷಕರ ಕಛೇರಿ/ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ರೈತ ಸಂಪರ್ಕ ಕೇಂದ್ರ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ತೋಟಗಾರಿಕೆ/ ರೇಷ್ಮೆ ಇಲಾಖೆಯ ಕಛೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ದಾಖಲೆಗಳನ್ನು ಮುಂದಿನ 5 ದಿನಗಳ ಒಳಗಾಗಿ ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಈ ಆ್ಯಪ್ ನ್ನು ಸರಕಾರದ ವಿವಿಧ ಯೋಜನೆಗಳಾದ  ಕೃಷಿ ಇಲಾಖೆಯ ಪಿಎಂ ಕಿಸಾನ್, ಕೆ.ಕಿಸಾನ್ ಯೋಜನೆ, ತೋಟಗಾರಿಕಾ ಇಲಾಖೆಯ ಹಸಿರು ಯೋಜನೆ, ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಯ ಯೋಜನೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಯೋಜನೆಗಳು , ರೇಷ್ಮೆ ಇಲಾಖೆಯಡಿ ಬರುವ ಯೋಜನೆಗಳು, ಬ್ಯಾಂಕ್ ಗಳಿಂದ ನೀಡಲಾಗುವ ಕೃಷಿ ಸಾಲ, ಬೆಳೆ ವಿಮೆ , ರಸಗೊಬ್ಬರ ಪೂರೈಕ  ಹಾಗೂ ಕಂದಾಯ ಮತ್ತು ಇತರ ಇಲಾಖೆಗಳ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಹಕಾರಿಯಾಗುವಂತೆ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸುವ ಸಲುವಾಗಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!