ಟೋಕಿಯೋ ಪ್ಯಾರಾಲಿಂಪಿಕ್ಸ್: ಹೈ ಜಂಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಹೈ ಜಂಪ್ ನಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ T64 ಈವೆಂಟ್ ನಲ್ಲಿ ಭಾರತದ ಪ್ರವೀಣ್ ಕುಮಾರ್ 2.07 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ 2ನೇ ಸ್ಥಾನಕ್ಕೇರಿದರು.ಆ ಮೂಲಕ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು.

ಇದೇ ಪಂದ್ಯದಲ್ಲಿ ಬ್ರಿಟನ್ ನ ಜೋನಾಥನ್ ಬ್ರೂಮ್ ಎಡ್ವರ್ಡ್ಸ್ ಅವರು 2.10 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದರೆ, 2.04 ಮೀಟರ್ ಎತ್ತರಕ್ಕೆ ಜಿಗಿದ ಪೋಲೆಂಡ್ ನ ಮ್ಯಾಕೀಜ್ ಲೆಪಿಯಾಟೊ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಇನ್ನು ಈ ಬೆಳ್ಳಿ ಪದಕದ ಮೂಲಕ ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 11ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2 ಚಿನ್ನ, 6 ಬೆಳ್ಳಿ ಮತ್ತು 3 ಕಂಚಿನ ಪದಕಗಳಿವೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪ್ರವೀಣ್ ಕುಮಾರ್ ಅವರಿಗೆ ಶುಭಾಶಯ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ದೇಶದ ಹೆಮ್ಮೆ. ಈ ಪದಕ ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಕೇಂದ್ರ ಸಚಿವ ಅಮಿತ್ ಶಾ ಅವರೂ ಕೂಡ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿದ್ದು, ‘ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆಯು ರಾಷ್ಟ್ರಕ್ಕೆ ಹೆಚ್ಚಿನ ಕೀರ್ತಿಯನ್ನು ತರುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೂ ಕೂಡ ಪ್ರವೀಣ್ ಕುಮಾರ್ ಸಾಧನೆಯನ್ನು ಶ್ಲಾಘಿಸಿದ್ದು, ‘ಪುರುಷರ ಹೈಜಂಪ್ ಟಿ64 ಫೈನಲ್‌ನಲ್ಲಿ 2.07 ಮೀ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆಗಳು, ಇದು ಹೊಸ ಏಷ್ಯನ್ ದಾಖಲೆ ಸೃಷ್ಟಿಸಿದೆ. ಇದು ಟೋಕಿಯೋ 2020 ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 11 ನೇ ಪದಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!