ರಾಹುಲ್ ಗಾಂಧಿ ಟ್ವೀಟರ್ ಖಾತೆ ಅಮಾನತು: ಯುವ ಕಾಂಗ್ರೆಸ್ ಮತ್ತು ಎನ್‍ಎಸ್‍ಯುಐ ವಿರೋಧ

ನವದೆಹಲಿ, ಆ.09 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧಿಕೃತ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿರುವುದನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಮತ್ತು ಎನ್‍ಎಸ್‍ಯುಐ ವಿರೋಧಿಸಿದೆ.

ಈ ವಿಚಾರವಾಗಿ ಕಾಂಗ್ರೆಸ್ ನ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಮಾತನಾಡಿ, ಟ್ವೀಟರ್ ಇಂಡಿಯಾ ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ವೀಟರ್ ಇಂಡಿಯಾ ರಾಹುಲ್ ಗಾಂಧಿ ಅವರ ಖಾತೆಯನ್ನು ಬ್ಲಾಕ್ ಮಾಡಬಹುದು. ಆದರೇ ಅವರು ಜನ ಪರ ಧ್ವನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನಿರಂತರವಾಗಿ ಬಡ ಜನರ ಧ್ವನಿಯಾಗಿ, ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಾರೆ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‍ಎಸ್‍ಯುಐ(ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ)ನ ಮುಖ್ಯಸ್ಥ ನೀರಜ್ ಕುಂದನ್, “ಬಿಜೆಪಿ ಸರ್ಕಾರದ ಬೆದರಿಕೆ ರಾಜಕಾರಣ ಮಿತಿ ಮೀರುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಅಮಾನತುಗೊಳಿಸಲು ಟ್ವಿಟರ್ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ  ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಅವರೊಂದಿಗೆ ಮಾತಾಡುತ್ತಿರುವಾಗ ತೆಗೆಸಿಕೊಂಡಿದ್ದ ಪೋಟೋವನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪೋಸ್ಟ್ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆದರೆ ಟ್ವಿಟರ್ ಪೋಸ್ಟ್‍ನಲ್ಲಿ ಬಾಲಕಿಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡಿದ್ದರಿಂದ ಸಂತ್ರಸ್ತ ಬಾಲಕಿಯ ಪೋಷಕರ ಗುರುತನ್ನು ಬಹಿರಂಗಪಡಿಸಲಾಗಿದೆ ಎಂದು ಆ ಟ್ವೀಟ್ ಅನ್ನು ಟ್ವಿಟರ್ ತೆಗೆದುಹಾಕಿತ್ತು. 

Leave a Reply

Your email address will not be published. Required fields are marked *

error: Content is protected !!