ಉಳ್ಳಾಲ ವ್ಯಕ್ತಿಯ ಹನಿಟ್ರ್ಯಾಪ್ ಪ್ರಕರಣ: ಮಹಿಳೆ ಸೇರಿ ಇಬ್ಬರ ಬಂಧನ

ದ.ಕ ಜು.29: ಉಳ್ಳಾಲದ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್’ಗೆ ಒಳಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಝೀನ್ ಸಿ. (24) ಹಾಗೂ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಹತೀಜಮ್ಮ ಅಲಿಯಾಸ್ ಸಫ್ನಾ (23) ಬಂಧಿತ ಆರೋಪಿಗಳು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಅದರಂತೆ ಉಳ್ಳಾಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತ ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ಪಾರ್ಟಿಯ ನೆಪದಲ್ಲಿ ಮದ್ಯದ ಜತೆ ಅಮಲು ಪದಾರ್ಥ ಬೆರೆಸಿ ಕುಡಿಸಿ ಅವರನ್ನು ವಿವಸ್ತ್ರ ಗೊಳಿಸಿ ವೀಡಿಯೋ ಮಾಡಿ ಮನೆಯಿಂದ 2.15 ಲಕ್ಷ ರೂ. ಹಾಗೂ ಉಂಗುರವನ್ನು ಕಳವು ಮಾಡಿ ಹನಿಟ್ರ್ಯಾಪ್ ಗೊಳಪಡಿಸಿರುವ ಬಗ್ಗೆ ದೂರು ದಾಖಲಾಗಿತ್ತು.

ದುಬೈನಲ್ಲಿ ಉದ್ಯೋಗದಲ್ಲಿದ್ದು, ವಾಪಾಸಾಗಿದ್ದ ವ್ಯಕ್ತಿಯನ್ನು ಅಝ್ವಿನ್ ಹಾಗೂ ಆತನ ಗೆಳತಿ ಸಫ್ನಾ ಅಲಿಯಾಸ್ ಹತಿಜಮ್ಮ ಎಂಬವರು ಜು.19ರಂದು ಪಾರ್ಟಿ ಮಾಡುವುದಾಗಿ ಹೇಳಿ ವ್ಯಕ್ತಿಗೆ ಮದ್ಯ ಕುಡಿಸಿದ್ದಾರೆ. ಮದ್ಯಕ್ಕೆ ಅಮಲು ಬರುವ ಪದಾರ್ಥವನ್ನು ಬೆರೆಸಿದ್ದರೆನ್ನಲಾಗಿದ್ದು, ವ್ಯಕ್ತಿ ಮೂರ್ಛೆ ಹೋದ ಬಳಿಕ ಆತನನ್ನು ವಿವಸ್ತ್ರಗೊಳಿಸಿ ಮನೆಯ ಕಪಾಟುವಿನಲ್ಲಿದ್ದ 2.12 ಲಕ್ಷ ರೂ. ನಗದು ಹಾಗೂ ವ್ಯಕ್ತಿಯ ಕೈಯಲ್ಲಿದ್ದ ನವರತ್ನದ ಉಂಗುರವನ್ನು ಎಗರಿಸಿದ್ದರು.

ಮರುದಿನ ವಂಚನೆಗೊಳಗಾಗಿದ್ದ ವ್ಯಕ್ತಿ ಅಝ್ವಿನ್ ಮನೆಗೆ ಹೋಗಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದಾರೆ. ಈ ಸಂದರ್ಭ ಆರೋಪಿಗಳು ಹಣವನ್ನು ನಾಳೆ ಕೊಡುವುದಾಗಿ ಹೇಳಿದ್ದಲ್ಲದೆ, ದೂರು ನೀಡದಂತೆ ನಂಬಿಸಿದ್ದರು. ಆದರೆ ಮತ್ತೆ ಆರೋಪಿಗಳು ಆ ವ್ಯಕ್ತಿಯ ಮನೆಗೆ ಹೋಗಿ, ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾರೆ. ಮಾತ್ರವಲ್ಲದೆ ತನ್ನ ತಂಗಿಯ ಬಲಾತ್ಕಾರಕ್ಕೆ ಯತ್ನಿಸಿರುವುದಾಗಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣಗಳು ಬಹಳಷ್ಟು ನಡೆಯುತ್ತಿದ್ದು, ಕೆಲವರು ಗೌರವಕ್ಕೆ ಧಕ್ಕೆಯಾಗುವ ದೃಷ್ಟಿಯಿಂದ ದೂರು ನೀಡಲು ಹಿಂಜರಿಯುವ ಮೂಲಕ ಮತ್ತಷ್ಟು ತೊಂದರೆಗೊಳಗಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ದೂರು ಅಥವಾ ಮಾಹಿತಿಯನ್ನು ನೀಡಿದರೆ ಗೌಪ್ಯತೆ ಕಾಪಾಡಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!