5 ತಿಂಗಳ ಹಸುಗೂಸು ಉಳಿಸಲು ಬೇಕಿದೆ 16 ಕೋಟಿಯ ಇಂಜೆಕ್ಷನ್!, ಸಹೃದಯಿಗಳಲ್ಲಿ ಮನವಿ

ಉಡುಪಿ ಜು.28(ಉಡುಪಿ ಟೈಮ್ಸ್ ವರದಿ): ಇತ್ತೀಚಿನ ದಿನಗಳಲ್ಲಿ ಹಸುಗೂಸುಗಳನ್ನೂ ಬಿಡದೇ ಕಾಡುತ್ತಿದೆ ಸ್ಪೈನಲ್ ಮಸ್ಕುಲರ್ ಆಟ್ರೋಫಿ ಎಂಬ ಅಪರೂಪದ ಕಾಯಿಲೆ. ಈ ಕಾಯಿಲೆಯ ಚಿಕಿತ್ಸೆಗೆ ಬೇಕಾಗುವ ಒಂದು ಇಂಜೆಕ್ಷನ್ ಗೆ ಕೋಟ್ಯಾಂತರ ರೂ. ವ್ಯಯಿಸಬೇಕಾಗುತ್ತದೆ.

ಈ ಅಪರೂಪದ ಕಾಯಿಲೆಯನ್ನು ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂದು ಹೇಳುತ್ತಾರೆ. ಇದೀಗ ಈ ಕಾಯಿಲೆಯ ಕಪಿಮುಷ್ಠಿಯಲ್ಲಿ ಒದ್ದಾಡುತ್ತಿದೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ  ಬೆಳ್ಮಣ್ ನ ಐದು ತಿಂಗಳ ಕಂದಮ್ಮ. 

ಬೆಳ್ಮಣ್ ನ ಸಂದೀಪ್ ಮತ್ತು ಉಡುಪಿ ಮಾರ್ಪಳ್ಳಿಯ ರಂಜಿತಾ ದಂಪತಿಯ ನತದೃಷ್ಟ ಈ ಕಂದಮ್ಮನ ಹೆಸರು ಮಿಥಾನ್ಶ್ ದೇವಾಡಿಗ. ಈ ಅಪರೂಪದ ಕಾಯಿಲೆಯಿಂದ ಈ ಮಗುವನ್ನು ಕಾಪಾಡಿಕೊಳ್ಳಬೇಕಾದರೆ 16 ಕೋಟಿಯ ಇಂಜೆಕ್ಷನ್ ಬೇಕಾಗುತ್ತದೆ.

ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ಹಾಸಿಗೆ ಹಿಡಿದಿರುವ ಈ ಹಸುಗೂಸಿಗೆ ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ತಾಯಿ ಎದೆ ಹಾಲು ಕುಡಿಯುವುದಕ್ಕೂ ಕಷ್ಟ ಪಡುತ್ತಿದೆ ಈ ಕಂದಮ್ಮ. ಮಗುವಿಗೆ ಒಂದೂವರೆ ತಿಂಗಳಾಗಿದ್ದಾಗ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ತಕ್ಷಣ ಮಗುವನ್ನು ಉಡುಪಿಯ ಸರಕಾರಿ ಬಿ.ಆರ್ ಶೆಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದರು. ಈ ವೇಳೆ ವೈದ್ಯರು ಇದೊಂದು ಅಪರೂಪದ ಕಾಯಿಲೆಯಾಗಿದ್ದು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದರು.

ಗಾಬರಿಗೊಂಡ ದಂಪತಿ ಮಗುವನ್ನು ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಕ್ಕಳ ತಜ್ಞರಿಗೆ ಮಗುವನ್ನು ತೋರಿಸಿದಾಗ ಮಗುವಿಗೆ ಸ್ಪೈನಲ್ ಮಸ್ಕುಲರ್ ಆಟ್ರೋಫಿ ಕಾಯಿಲೆ ಇರುವುದಾಗಿ ಗೊತ್ತಾಗಿದೆ. ಇದನ್ನು ಕೇಳಿ ದಂಪತಿ ಕಂಗಾಲಾಗಿದ್ದು, ಮಗುವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಇದೀಗ ಈ ಪುಟ್ಟ ಕಂದಮ್ಮನನ್ನು ಉಳಿಸಿಕೊಳ್ಳಲು 16 ಕೋಟಿಯ ಇಂಜೆಕ್ಷನ್ ಕೊಡಬೇಕಿದೆ ಎಂದೂ ಅದು ಅಮೆರಿಕದಲ್ಲಿ ಮಾತ್ರ ಸಿಗುವುದು ಎಂದೂ ವೈದ್ಯರು ತಿಳಿಸಿದ್ದಾರೆ. ಇದರಿಂದ ಕಂಗಾಲಾಗಿರುವ ದಂಪತಿಗಳು ಮಗುವಿನ ರಕ್ಷಣೆಗಾಗಿ ದಾನಿಗಳ ಸಹಾಯವನ್ನು ಎದುರು ನೋಡುತ್ತಿದ್ದಾರೆ. ಮಗುವಿನ ತಂದೆ ಎಲೆಕ್ಟ್ರೀಶನ್ ಆಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಕೆಲಸವಿಲ್ಲದ ಕಾರಣ ಕಂಗಾಲಾಗಿದ್ದಾರೆ. ಈಗಾಗಲೇ ಮಗುವಿನ‌ ಪೋಷಕರು ಇಂಪಾಕ್ಟ್ ಗುರು ಮತ್ತು ಮಿಲಾಪ್ ಮೂಲಕ ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದಾರೆ. ಈತನಕ ಸುಮಾರು 40 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಇನ್ನೂ ಅಪಾರ ಮೊತ್ತದ ಅಗತ್ಯವಿದ್ದು ಸಹೃದಯಿ ದಾನಿಗಳ ಸಹಾಯವನ್ನು ಎದುರು ನೋಡುತ್ತಿದ್ದಾರೆ.

ಈ ಕಂದಮ್ಮನಿಗೆ ಸಹಾಯ ಮಾಡಬಯಸುವವರು: Mithansh S. Devadiga Account number: 700701717162983 IFSC CODE: YESB0CMSNOC ಗೆ ಹಣ ಜಮೆ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!