ಗಣಪತಿ ವಿಗ್ರಹವನ್ನು ನುಂಗಿದ 3 ವರ್ಷದ ಮಗು!

ಬೆಂಗಳೂರು ಜು.25: ಮೂರು ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ಗಣಪತಿಯ ಸಣ್ಣ ವಿಗ್ರಹವನ್ನು ನುಂಗಿ ಆತಂಕ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ. ಇದೀಗ ಮಗುವಿನ ದೇಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಗ್ರಹವನ್ನು ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಅಲ್ಲದೆ ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಮೆಟಲ್​​ ನ ಚಿಕ್ಕ ವಿನಾಯಕನ ವಿಗ್ರಹವನ್ನು ಮಗು ನುಂಗಿ ಅದು ಎದೆ ಭಾಗದಲ್ಲಿ ಸಿಲುಕಿಕೊಂಡಿತ್ತು. ಕೂಡಲೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ದೇಹದಲ್ಲಿ ವಿಗ್ರಹ ಸಿಕ್ಕಿ ಹಾಕಿಕೊಂಡಿದ್ದ ಬಗ್ಗೆ ತಿಳಿದ ವೈದ್ಯರು ಅರೆಕ್ಷಣ ಗಾಬರಿ ಗೊಂಡಿದ್ದರು. ಬಳಿಕ ವಿಗ್ರಹದ ಮಾದರಿ, ಗಾತ್ರವನ್ನು ಅರಿಯಲು ಹಾಗೂ ಮಗುವಿನ ದೇಹದ ಯಾವ ಭಾಗದಲ್ಲಿ ವಿಗ್ರಹ ಸಿಕ್ಕಿಹಾಕಿಕೊಂಡಿದೆ ಎಂದು ತಿಳಿದುಕೊಳ್ಳಲು ಎಕ್ಸ್​​ರೇ ತೆಗೆದಿದ್ದಾರೆ.

ಈ ವೇಳೆ ಅನ್ನನಾಳದ ಬಳಿ ವಿಗ್ರಹ ಇರುವುದು ಪತ್ತೆಯಾಗಿತ್ತು. ಕೂಡಲೇ ಎಂಡೋಸ್ಕೋಪಿ ಮೂಲಕ ವಿಗ್ರಹವನ್ನು ಹೊರ ತೆಗೆಯಲು  ಪ್ರಯತ್ನಿಸಿದ ವೈದ್ಯರು,  ಕೆಲವೊಂದು ವಿಧಾನಗಳ ಮೂಲಕ ವಿಗ್ರಹವನ್ನು ಮಗುವಿನ ಹೊಟ್ಟೆಯ ಭಾಗಕ್ಕೆ ತಂದಿದ್ದರು. ನಂತರ ಎಂಡೋಸ್ಕೋಪಿ ಮೂಲಕ ವಿಗ್ರಹವನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದರು. ಸದ್ಯ ಮಗು ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದೆ‌ ಎಂದು ತಿಳಿದು ಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಇಂಥ ಪ್ರಕರಣಗಳಲ್ಲಿ ಮಕ್ಕಳು ದೂರಲು ಆಗುವುದಿಲ್ಲ. ಪೋಷಕರೇ ಎಚ್ಚರದಿಂದ ಕೆಲವೊಂದು ವಸ್ತುಗಳನ್ನು ಮಕ್ಕಳಿಗೆ ಆಡಲು ಕೊಡಬಾರದು. ಮಕ್ಕಳ ಕೈ ಸಿಗುವಂತೆ ಇಡಬಾರದು. ಪುಟ್ಟ ಮಕ್ಕಳು ಕಂಡಿದನ್ನೆಲ್ಲಾ ಬಾಯಿಗೆ ಇಟ್ಟುಕೊಳ್ಳುತ್ತಾರೆ. ಇಂಥ ಅವಘಡಗಳು ಸಂಭವಿಸಿದಾಗ ಮನೆಯಲ್ಲೇ ಪ್ರಯತ್ನಗಳು ಮಾಡುವುದಕ್ಕಿಂದ ಕೂಡಲೇ ವೈದ್ಯರನ್ನು ಕಾಣಬೇಕು.  ಹಾಗೂ ಪೋಷಕರು ಎಚ್ಚರದಿಂದ ಇರಬೇಕು ಎಂದು  ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!