ಮೀನುಗಾರರಿಗೆ ಸಬ್ಸಿಡಿ ನೀಡೋಕೆ ಏನು ಕಷ್ಟ ಯಡಿಯೂರಪ್ಪನವರೇ… ಉಡುಪಿಯಲ್ಲಿ ಡಿಕೆ ಶಿವಕುಮಾರ್

ಉಡುಪಿ ಜು.6(ಉಡುಪಿ ಟೈಮ್ಸ್ ವರದಿ): ಮಲ್ಪೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮೀನುಗಾರರ ಸಮಸ್ಯೆಗಳ ಕುರಿತ ಕುಂದು ಕೊರತೆ ಸಭೆ ನಡೆಯಿತು. 

ಸಭೆಯಲ್ಲಿ ಮಾತನಾಡಿದ ಡಿಕೆ. ಶಿವಕುಮಾರ್ ಅವರು, ಮೀನು ಇದ್ದರೆ ಮಾತ್ರ ಮೀನುಗಾರ. ಹಾಗಾಗಿ ಸರಕಾರ ಮೊದಲು ಮೀನು ಉಳಿಸುವ ಪ್ರಯತ್ನ ಮಾಡಬೇಕು. ಸರಕಾರಕ್ಕೆ ಕಣ್ಣು ಇಲ್ಲ, ಕಿವಿ ಇಲ್ಲ, ಹೃದಯನೂ ಇಲ್ಲ. ಹಾಗಾಗಿ ಮೀನುಗಾರರ ಕಷ್ಟ ಅರ್ಥವಾಗುತ್ತಿಲ್ಲ. ಹಿಂದೆ ನೀಡುತ್ತಿದ್ದ ಡೀಸೆಲ್‌, ಸೀಮೆಎಣ್ಣೆಯನ್ನು ಕೇಂದ್ರ ಸರಕಾರ ನಿಲ್ಲಿಸಿದೆ. 

ಮೀನುಗಾರರು ಯಾವುದೇ  ಸಂಬಳ, ಪ್ರಮೋಷನ್, ನಿವೃತ್ತಿ ಇಲ್ಲದೆ ಸಮಯದ ಪರಿಮಿತಿ ಇಲ್ಲದೆ ಕೆಲಸ ಮಾಡುತ್ತಾರೆ. ಹೀಗಿರುವಾಗ ಮೀನುಗಾರರಿಗೆ 50 ರೂ. ಮಾಡಿ ಡೀಸೆಲ್ ಸಬ್ಸಿಡಿ ನೀಡಿದರೆ ಮೀನುಗಾರರಿಗೆ ಸಹಕಾರಿಯಾಗುತ್ತದೆ ಎಂದ ಅವರು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಅದೇ ರೀತಿ ಮೀನುಗಾರರಿಗೆ ಸಬ್ಸಿಡಿ ನೀಡೋಕೆ ಏನು ಕಷ್ಟ ನಿಮಗೆ  ಯಡಿಯೂರಪ್ಪನವರೇ ಎಂದು ಮುಖ್ಯ ಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ‌ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಮೀನುಗಾರರು ಬಹಳ ಕಷ್ಟದಲ್ಲಿ ಇದ್ದಾರೆ ಅವರ ಕಷ್ಟಸುಖಗಳನ್ನು ಕೇಳಬೇಕು. ಮೀನುಗಾರರ ಸಮಸ್ಯೆಯನ್ನು ಅವರ ಬಾಯಿಂದಲೇ ಕೇಳಬೇಕು. ಪಕ್ಷದ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇಂದು ಡಿಕೆ ಶಿವ ಕುಮಾರ್ ಅವರು ಮಲ್ಪೆ ಬಂದರಿಗೆ ಬಂದಿದ್ದಾರೆ. ಅವರು, ಯಾವುದಾದರೂ ವಿಷಯವನ್ನು ಛಲ ಹಿಡಿದು ಮಾಡಬೇಕು ಅಂದು ಕೊಂಡರೆ  ಅದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಅರಂತೆ ಮೀನುಗಾರರ ಸಮಸ್ಯೆಯನ್ನು ಆಲಿಸುವ ಸಲುವಾಗಿ ಎಲ್ಲಿಯಾದರೂ ಸರಿ, ಹೇಗಾದರೂ ಮಾಡಿ ಮೀನುಗಾರರ ಸಮಸ್ಯೆಯನ್ನು ಕೇಳುವಂತ ಕಾರ್ಯಕ್ರಮ ಆಯೋಜಿಸುವಂತೆ ಎಂದು ತಾಕೀತು ಮಾಡಿದರು. ಅದರಂತೆ ಇಂದು ಅವರು ಮೀನುಗಾರರ ಸಮಸ್ಯೆ ಆಲಿಸಲು ಬಂದಿದ್ದಾರೆ.

ಮೀನುಗಾರರು ತಮ್ಮ ಕಷ್ಟವನ್ನು ಡಿ.ಕೆ ಶಿವ ಕುಮಾರ್ ಅವರ ಬಳಿ ಹೇಳಿಕೊಂಡರೆ ಅವರು ಮುಖ್ಯ ಮಂತ್ರಿ ಅವರ ಬಳಿ ಮಾಹಿತಿ ನೀಡುತ್ತಾರೆ. ಈ ಮೂಲಕ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಲ್ಪೆಯಲ್ಲಿ ಇಂದು ನಡೆದ ಮೀನುಗಾರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಮೀನುಗಾರರು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಮನವಿ ನೀಡಿದ್ದಾರೆ. ಈ ವೇಳೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಅವರು ಮಾತನಾಡಿ, ಮೀನುಗಾರರಿಗೆ ನೀಡುವ ಡೀಸೆಲ್ ನಲ್ಲಿ ಸೆಸ್ ವಿನಾಯತಿ ನೀಡಲು ಒತ್ತಾಯಿಸಿದರು.

ಮೀನುಗಾರರಿಗೆ ನೀಡುವ ಡೀಸೆಲ್ ನ್ನು ಮಾರಟ ಮಾಡುತ್ತಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮೀನುಗಾರರು ಕಳ್ಳರಲ್ಲ. ಅಂತಹ ಯಾವುದೇ ಅವ್ಯವಹಾರ ಮೀನುಗಾರರು ಮಾಡುತ್ತಿಲ್ಲ ಎಂದರು. ಕರಾವಳಿ ಭಾಗದಲ್ಲಿ 5,000 ಯಾಂತ್ರೀಕೃತ ಬೋಟ್ ಗಳಿವೆ. ನಿಯಮ ಪ್ರಕಾರ 12 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆ ನಡೆಸಬೇಕು ಎಂದು ನಿಯಮವಿದೆ. ಆದರೆ ಸಮುದ್ರದಲ್ಲಿ ರಾಜ್ಯದ ಗಡಿ ಪ್ರದೇಶಗಳು ಗೊತ್ತಾಗದೆ ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯದ ಗಡಿ ಪ್ರದೇಶ  ಪ್ರವೇಶಿಸಿದರೆ ಅಲ್ಲಿ ಹಲ್ಲೆ ನಡೆಸುತ್ತಾರೆ, ದಂಡವನ್ನು ವಿಧಿಸುತ್ತಾರೆ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತವಾದ ನಿಯಮ ರಚಿಸಬೇಕು ಎಂದು ಆಗ್ರಹಿಸಿದರು. ಹಾಗೂ ಗೊತ್ತಿಲ್ಲದೇ ಗಡಿ ಪ್ರದೇಶ ದಾಟುವ ಮೀನುಗಾರರಿಗೆ ಅಧಿಕಾರಿಗಳಿಂದ,  ಸ್ಥಳೀಯ ಮೀನುಗಾರ ರಿಂದ ಹಲ್ಲೆ ಆಗಿದೆ‌. ಅದನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡರು.

ನಾಡ ದೋಣಿ ಮೀನುಗಾರರ ಅಧ್ಯಕ್ಷ ಶಿವಪ್ಪ ಕಾಂಚನ್  ಅವರು ಮಾತನಾಡಿ, ಬೈಂದೂರು ಮತ್ತು ಕುಂದಾಪುರದಲ್ಲಿ 3650 ನಾಡ ದೋಣಿ ಮೀನುಗಾರರಿದ್ದಾರೆ. ಈ ಭಾಗರಲ್ಲಿ ಮೀನುಗಾರಿಕೆಯಿಂದ 20,000 ಉದ್ಯೋಗ ಸೃಷ್ಟಿಯಾಗಿದೆ ಆದರೆ ಮೀನುಗಾರರಿಗೆ ಹೆಚ್ಚಿನ ಸೌಲಭ್ಯ ನೀಡುವ ಬದಲು ಇರುವ ಸೌಲಭ್ಯವನ್ನೂ ಕಡಿತಗೊಳಿಸಿದ್ದಾರೆ. ಈಗಾಗಲೇ ಬಂದರು ಅಭಿವೃದ್ಧಿಗೆ 66 ಕೋಟಿ ರೂಪಾಯಿ ವ್ಯಯ ಮಾಡಿದರೂ ಸಂಪೂರ್ಣವಾಗಿ ಬಂದರು ನಿರ್ಮಾಣವಾಗಿಲ್ಲ. ಬಂದರಿನಲ್ಲಿ ಇನ್ನೂ 70 ಮೀಟರ್ ಕಾಮಗಾರಿ ಬಾಕಿ ಇದೆ‌ ಹಾಗೂ ಕಾಮಗಾರಿ ಕುರಿತ ಸಭೆಯಲ್ಲಿ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಾರೆ ಮೀನುಗಾರಿಕೆಗೆ ಸಂಬಂಧಿಸಿದ ಈ ಕಾಮಗಾರಿ ಕುರಿತ ಸಭೆಯಲ್ಲಿ ಸ್ಥಳೀಯ ಮೀನುಗಾರರಿಗೂ ಅವಕಾಶ ನೀಡಿ ಅವರನ್ನು ಒಳಗೊಂಡಂತೆ ಸಭೆ ನಡೆಸಬೇಕು ಎಂದು ಮನವಿ ಮಾಡಿಕೊಂಡರು. ಯಾವುದೇ ಬೋಟ್ ದುರಂತ ನಡೆದ ಸಂದರ್ಭದಲ್ಲಿ ಆಶ್ವಾಸನೆ ನೀಡುತ್ತಾರೆ ಆದರೆ ಯಾವುದೇ ಪರಿಹಾರ ಸರಿಯಾಗಿ ಸಿಗುತ್ತಿಲ್ಲ  ಎಂದು ಇದೇ ವೇಳೆ ಅವರು ತಮ್ಮ ಸಮಸ್ಯೆ ಯನ್ನು ತೋಡಿಕೊಂಡರು.

ಇದೇ ವೇಳೆ ಆನಂದ ಎಂಬುವವರು ಮಾತನಾಡಿ, ಬೋಟ್ ಅವಘಡದ ಸಂದರ್ಭದಲ್ಲಿ 35 ಲಕ್ಷ  ಹಾನಿಯಾದರೆ ಕೇವಲ ಒಂದು ಲಕ್ಷ ಮಾತ್ರ ಪರಿಹಾರ ನೀಡುತ್ತಾರೆ. ಈ ಪರಿಹಾರವನ್ನು ಪಡೆಯಲೂ  ಸತಾಯಿಸುತ್ತಾರೆ. ಮೀನುಗಾರಿಕೆ ಕೇವಲ 3-4 ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇದ್ದಂತೆ ಮೀನುಗಾರಿಕೆ ಈಗ ನಡೆಯುತ್ತಿಲ್ಲ. ಸಾವಿರಾರು ಕೋಟಿ ವಿದೇಶಿ ವಿನಿಮಯ ನಡೆಯುವ ಮೀನುಗಾರಿಕೆ ನಶಿಸಿಹೋಗುತ್ತಿದೆ.  ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದರು 2006 ರಿಂದ ನೀಡುತ್ತಿದ್ದ 250 ಲೀಟರ್ ಸೀಮೆಎಣ್ಣೆ ಮೀನುಗಾರರಿಗೆ ಸಾಕಾಗುತ್ತಿಲ್ಲ ಎಂದ ಅವರು, ಈ ಪ್ರಮಾಣವನ್ನು ಹೆಚ್ಚು ಮಾಡುವಂತೆ ಆಗ್ರಹಿಸಿದರು. 

ಇದೇ ವೇಳೆ ಮೀನುಗಾರರಿಗೆ ಮನೆ ನಿವೇಶನಗಳನ್ನು ನೀಡುತ್ತಿಲ್ಲ ಎಂದ ಅವರು,ಬೋಟ್ ಗಳ ಮೇಲೆ ಪಡೆದ ಸಾಲ ಮರುಪಾವತಿಗೆ ಸಮಸ್ಯೆಯಾಗುತ್ತಿದೆ ಸಾಲ ಮರುಪಾವತಿ ಆಗದಿದ್ದಾಗ ಬೋಟ್ ನ್ನು ಹರಾಜು ಮಾಡುವ ಬದಲು ಮನೆಯನ್ನು ಹರಾಜು ಹಾಕುತ್ತಿದ್ದಾರೆ ಇದರಿಂದ ಸಮಸ್ಯೆ ಆಗುತ್ತಿದೆ ಎಂದರು. ಇನ್ನು ಈ ವೇಳೆ ರಮೇಶ್ ಕುಂದರ್ ಅವರು ಮಾತನಾಡಿ, ಮೀನುಗಾರರಿಗೆ ನೀಡುತ್ತಿರುವ ಸಬ್ಸಿಡಿ ಡೀಸೆಲ್‌ನ್ನು ಹೆಚ್ಚಿಸಬೇಕು ಹಾಗೂ ಸಿಆರ್ಝಡ್ ಸಮಸ್ಯೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಾಗೂ ಸಹಕಾರಿ ಸಂಘಗಳಿಂದ   ಮನೆ ಕಟ್ಟಲು ಸಾಲ ಪಡೆಯಲು  ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಬೇಕು ಎಂದರು 

ಬಾಬು ಕುಮಾರ್ ಎಂಬವರು ಮಾತನಾಡಿ,  ಪರ್ಷಿಯನ್ ವೋಟ್ನಲ್ಲಿ ಒಂಬತ್ತು ಜನ ಮೀನುಗಾರರು ಮಾತ್ರ ಕಾರ್ಯಾಚರಿಸಲು ಅವಕಾಶ ನೀಡಿ ನಿಯಮ ಇರುವುದರಿಂದ ಸಮಸ್ಯೆ ಆಗುತ್ತಿದೆ. ಕರಾವಳಿ ಯಲ್ಲಿ ಪರ್ಶಿಯನ್ ಬೋಟ್ ನಲ್ಲಿ 35ರಿಂದ 40 ಮಂದಿ ಮೀನುಗಾರರು ಕೆಲಸ ಮಾಡುತ್ತಾರೆ. ಇದರಿಂದ ಅವಘಡದ ನಡೆದ ಸಂದರ್ಭದಲ್ಲಿ ವಿಮೆ ಮೊತ್ತಕ್ಕೆ ಸಮಸ್ಯೆಯಾಗುತ್ತಿದೆ ಎಂದರು. ಹಾಗೂ ಮೀನುಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಇದರೊಂದಿಗೆ ಇತರ ಉದ್ಯೋಗವನ್ನು ನೀಡುತ್ತಿಲ್ಲ ಆದ್ದರಿಂದ ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ಬೇಡಿಕೆ ಸಲ್ಲಿಸಿದ್ದಾರೆ

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!