ಉಡುಪಿ: ಕಲ್ಮಾಡಿ ವೆಲಂಕಣಿ ಮಾತೆ ದೇವಾಲಯದ ಧರ್ಮಗುರು ಅತ್ತೂರಿಗೆ ವರ್ಗಾವಣೆ

ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಸಾಲಿನ ಅವಧಿ ಮುಗಿದ ಧರ್ಮಗುರುಗಳ ವರ್ಗಾವಣೆಯಾಗುತ್ತಿದ್ದು, ಪ್ರಮುಖವಾಗಿ ಕಲ್ಮಾಡಿ ವೆಲಂಕಣಿ ಮಾತೆ (ಸ್ಟೆಲ್ಲಾ ಮಾರೀಸ್) ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರು ವಂ. ಫಾ. ಆಲ್ಬನ್ ಡಿಸೋಜ, ಜುಲೈ 6 ರಂದು ಕಾರ್ಕಳದ ಸಂತ ಲಾರೆನ್ಸರ ಪುಣ್ಯಕ್ಷೇತ್ರ ಅತ್ತೂರಿಗೆ ವರ್ಗಾವಣೆಯಾಗಲಿದ್ದಾರೆ.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ವಿವಿಧ ಧರ್ಮಗುರುಗಳ ವರ್ಗಾವಣೆಯ ಆದೇಶ ಹೊರಡಿಸಿದ್ದು, ಈಗಾಗಲೇ ಹಲವು ಧರ್ಮಗುರುಗಳು ಅಧಿಕಾರ ಸ್ವೀಕರಿಸಿದ್ದಾರೆ. ಸಹಾಯಕ ಧರ್ಮಗುರುಗಳಿಗೆ 1-2 ವರ್ಷದ ಅವಧಿ ಮತ್ತು ಪ್ರಧಾನ ಧರ್ಮಗುರುಗಳಿಗೆ ಪ್ರಮುಖವಾಗಿ 5-7 ವರ್ಷದ ಅವಧಿಗೆ, ವಿವಿಧ ದೇವಾಲಯಗಳಲ್ಲಿ ಸೇವೆ ಸಲ್ಲಿಸಲು ಅಧಿಕಾರ ನೀಡಲಾಗುತ್ತದೆ.

ಕಳೆದ 9 ವರ್ಷಗಳಿಂದ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ. ಫಾ. ಆಲ್ಬನ್ ಡಿಸೋಜ, ಕಲ್ಮಾಡಿ ದೇವಾಲಯದ ವ್ಯಾಪ್ತಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ನಿಜಕ್ಕೂ ಅವಿಸ್ಮರಣೀಯ. ಕೇವಲ ನೂರು ಕ್ರೈಸ್ತ ಕುಟುಂಬಗಳಷ್ಟೇ ಇರುವ ಪುಟ್ಟ ವ್ಯಾಪ್ತಿಯಲ್ಲಿ, ಭಕ್ತರ ಸಹಕಾರದಿಂದ 12 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ.ಪ್ರಮುಖವಾಗಿ ನೋಡುಗರ ಮನಸೆಳೆಯುವ ಬೋಟಿನಾಕಾರದ ನೂತನ ದೇವಾಲಯವು ಭವ್ಯ ಮತ್ತು ಸುಸಜ್ಜಿತವಾಗಿದೆ.

ವೆಲಂಕಣಿ ಮಾತೆಯ ಆಶೀರ್ವಾದವನ್ನು ಪಡೆಯಲು ಬರುವ ಭಕ್ತರಿಗೆ ದೇವಾಲಯದ ವ್ಯಾಪ್ತಿಯಲ್ಲಿ ಒಳ್ಳೆಯ ವಾತಾವರಣವಿದೆ. ದಿನಂಪ್ರತಿ ಎಂಬಂತೆ ವಿವಿಧ ಊರಿನಿಂದ ನೂರಾರು ಭಕ್ತರು, ವಾಹನ ಸವಾರರು ದೇವಾಲಯದಲ್ಲಿ ಮಾತೆಯ ಆಶೀರ್ವಾದ ಪಡೆಯಲು ಬರುತ್ತಿದ್ದು, ವ್ಯವಸ್ಥಿತ ಮತ್ತು ಪ್ರಾರ್ಥನೆಗೆ ಒಳ್ಳೆಯ ವಾತಾವರಣವಿರುವ ದೇವಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿ ಸುತ್ತಾರೆ. ನೊಂದ ಮತ್ತು ಅಶಕ್ತ ಕುಟುಂಬಗಳ ಆಶಾಕಿರಣವಾಗಿರುವ ವಂ. ಫಾ. ಆಲ್ಬನ್, ‘ಪ್ರಾರ್ಥನೆಯ ಧರ್ಮಗುರು’ ಎಂದೇ ಪ್ರಖ್ಯಾತರಾಗಿದ್ದಾರೆ. 53ರ ವಯಸ್ಸಿನ ಇವರು ಕಲ್ಮಾಡಿ ದೇವಾಲಯದ ವ್ಯಾಪ್ತಿಯಲ್ಲಿ ನೂತನ ಗಂಟೆ ಗೋಪುರ, ಮಾನಸ್ತಂಭ ಸ್ಥಾಪಿಸಿ ಜನರ ವಿಶ್ವಾಸಗಳಿಸಿದ್ದಾರೆ. ಕಲ್ಮಾಡಿಯಲ್ಲಿ ದೇವಾಲಯ ಆರಂಭವಾಗಿ ಐವತ್ತರ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷವನ್ನು ಸುವರ್ಣ ಸಂಭ್ರಮದ ವರ್ಷವಾಗಿ ಘೋಷಣೆ ಮಾಡಲಾಗಿತ್ತು. ಸಂಭ್ರಮದ ‘ಜುಬಿಲಿ ಮಂಟಪವು’ ಸಿದ್ಧವಾಗಿದೆ. ಆದರೆ ಕೊರೋನಾದಿಂದ ಕಾರ್ಯಕ್ರಮವನ್ನು ಆರಂಭಿಸಲಾಗಿಲ್ಲ. 

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ನೀಡಿರುವ ವಂ. ಅಲ್ಬನ್, 1967ರ ಅಕ್ಟೋಬರ್ 9 ರಂದು ಶಂಕರಪುರದಲ್ಲಿ ಜನಿಸಿದರು. 1999ರ ಏಪ್ರಿಲ್ 6ರಂದು ಧರ್ಮ ಗುರುವಿನ ದೀಕ್ಷೆಯನ್ನು ಸ್ವೀಕರಿಸಿದರು. ಬಳಿಕ ದೂರದ ಬೀದರ್, ಮಂಗಳೂರಿನ ಕುಲಶೇಕರ್, ಕಾಸ್ಸಿಯ, ಪಕ್ಷಿಕೆರೆ ಹಾಗೂ ಉಡುಪಿಯ ಬಾರ್ಕೂರು ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಇವರು, ಬಳಿಕ ಕಲ್ಮಾಡಿ ದೇವಾಲಯಕ್ಕೆ ವರ್ಗಾವಣೆಯಾಗಿದ್ದರು. ದೇಶ ವಿದೇಶದ ಹಲವು ಭಕ್ತಾದಿಗಳು ಫಾ. ಆಲ್ಬನ್ ಡಿಸೋಜರವರ ಮಾರ್ಗದರ್ಶನ ಮತ್ತು ಆಶಿರ್ವಾದ ಪಡೆಯಲೆಂದೇ ಪುಣ್ಯಕ್ಷೇತ್ರಕ್ಕೆ ಆಗಮಿಸುತ್ತಿದ್ದುದು ವಿಶೇಷ. ಐಸಿವೈಎಂ ಉಡುಪಿ ವಲಯದ ನಿರ್ದೇಶಕರಾಗಿ ಯುವ ಸಂಘಟನೆಯನ್ನು ಬಲಿಷ್ಠಗೊಳಿಸಿದ ಕೀರ್ತಿ ಇವರದು. ಉಡುಪಿ ಧರ್ಮ ಪ್ರಾಂತ್ಯದಲ್ಲಿ ಹಲವು ಧರ್ಮಗುರುಗಳು ವರ್ಗಾವಣೆಯಾಗುತ್ತಿದ್ದು, 2 ವರ್ಷಗಳ ಹಿಂದೆ ಕಾರ್ಕಳದ ಅತ್ತೂರಿನ ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಬಸಿಲಿಕವಾಗಿ ಘೋಷಣೆ ಮಾಡಲಾಗಿದ್ದು, ಇಲ್ಲಿಯ ನೂತನ ರೆಕ್ಟರ್ ಆಗಿ ವಂ. ಫಾ. ಆಲ್ಬನ್ ಡಿಸೋಜ ಜುಲೈ 6ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 

ಕಲ್ಮಾಡಿ ಪುಣ್ಯ ಕ್ಷೇತ್ರದ ಅಭಿವೃದ್ದಿಯ ಹರಿಕಾರರಾಗಿರುವ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲೂ ಹೊಸ ಬೆಳವಣಿಗೆಯನ್ನು ತಂದ ವಂ. ಆಲ್ಬನ್ ಡಿಸೋಜ ರವರಿಗೆ ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯ ಪಾಲನ ಮಂಡಳಿ ಮತ್ತು ಆರ್ಥಿಕ ಸಮಿತಿಯ ನೇತ್ರತ್ವ ದಲ್ಲಿ ಸರಳವಾಗಿ ಬೀಳ್ಕೊಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಾಲನ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ ಮತ್ತು ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ರವರ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ, ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಧರ್ಮಗುರುಗಳಿಗೆ ವಿಶೇಷ ಉಡುಗೊರೆಯೊಂದಿಗೆ ಗೌರವಿಸಿ ಬೀಳ್ಕೊಡಲಾಯಿತು.

ಫಾ.ಆಲ್ಬನ್ ಡಿಸೋಜರವರೊಂದಿಗೆ ದೇವಾಲಯದಲ್ಲಿನ ಸೇವೆ ಸಲ್ಲಿಸಿದ್ದ ಸಹ ಧರ್ಮಗುರು ವಂ. ಪ್ರವೀಣ್ ಮೊಂತೆರೋ ಮಣಿಪಾಲಕ್ಕೆ, ಅತ್ತೂರು ಸಂತ ಲಾರೆನ್ಸರ ದೇವಾಲಯದ ಸಹಾಯಕ ಧರ್ಮಗುರು ವಂ. ಮೆಲ್ವಿಲ್ ರೋಯ್ ಲೋಬೊ ಕಲ್ಮಾಡಿಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಅತ್ತೂರು ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು, ರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಂ. ಜಾರ್ಜ್ ಡಿಸೋಜ ಮೂಡುಬೆಳ್ಳೆ ಸಂತ ಲಾರೆನ್ಸರ ದೇವಾಲಯಕ್ಕೆ ಮತ್ತು ಮೂಡುಬೆಳ್ಳೆಯ ಮೈನರ್ ಸೆಮಿನರಿಯ ರೆಕ್ಟರ್ ಆಗಿರುವ ವಂ.ಫಾ.ಬ್ಯಾಪ್ಟಿಸ್ಟ್ ಮಿನೇಜಸ್ (ಜ್ಯೂ) ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಹಾಯಕ ಧರ್ಮಗುರುಗಳಾದ ವಂ. ಫಾ. ರೊಲ್ವಿನ್ ಅರಾನ್ನಾ ಶಿರ್ವ ದೇವಾಲಯದ ಸಹಾಯಕ ಧರ್ಮಗುರು ಮತ್ತು ಡೋನ್ ಬಾಸ್ಕೋ ವಿದ್ಯಾ ಸಂಸ್ಥೆಯ ನಿಯೋಜಿತ ಪ್ರಿನ್ಸಿಪಾಲರಾಗಿ ನೇಮಕಗೊಂಡಿದ್ದಾರೆ. ಕೆರೆಕಟ್ಟೆ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ. ಫಾ. ಝೇವಿಯರ್ ಪಿಂಟೊ ನಿವೃತ್ತರಾಗಲಿದ್ದು, ಮಂಗಳೂರು ಧರ್ಮಪ್ರಾಂತ್ಯದಿಂದ ಫಾ. ಸುನಿಲ್ ವೇಗಸ್, ಕೆರೆಕಟ್ಟೆ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು ಗಳಾಗಿ ನೇಮಕಗೊಂಡಿದ್ದಾರೆ. ಮೂಡುಬೆಳ್ಳೆ ಸಂತ ಲಾರೆನ್ಸರ ದೇವಾಲಯದ ಪ್ರಧಾನ ಧರ್ಮಗುರು ವಂ. ಕ್ಲೆಮೆಂಟ್ ಮಸ್ಕರೇನ್ಹಸ್ ಕಾರ್ಕಳ ಟೌನಿನ ಕ್ರೈಸ್ಟ್ ಕಿಂಗ್ ದೇವಾಲಯಕ್ಕೆ ಪ್ರಧಾನ ಧರ್ಮಗುರುಗಳಾಗಿ ಮತ್ತು ಮೂಡುಬೆಳ್ಳೆಯ ಸಹಾಯಕ ಧರ್ಮಗುರು ವಂ. ಜಿತೇಶ್ ಕಸ್ತಲಿನೊ ವಿದ್ಯಾರ್ಜನೆಗಾಗಿ ವಿದೇಶಕ್ಕೆ ತೆರಳಲಿದ್ದು, ಶಂಕರಪುರದ ಸಂತ ಜೋನ್ ಎವಾಂಜಲಿಸ್ತ್ ದೇವಾಲಯಕ್ಕೆ ಮಂಗಳೂರಿನಿಂದ ಫಾ. ಅನಿಲ್ ಪಿಂಟೊ, ಶಂಕರಪುರದಲ್ಲಿ ಸಹಾಯಕ ಧರ್ಮಗುರುಗಳಾಗಿದ್ದ ಫಾ. ರೋಷನ್ ಡಿಕುನ್ಹಾ ಮಂಗಳೂರಿನ ಬಜ್ಪೆ ದೇವಾಲಯಕ್ಕೆ ವರ್ಗಾವಣೆಯಾಗಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!