ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಸ್ವಚ್ಚ ಪರಿಸರ ನಿರ್ಮಾಣ ಸಾಧ್ಯ-ಮೇರಿ ಡಿಸೋಜಾ

ಉಡುಪಿ: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಸ್ವಚ್ಚ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ. ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ ಹೇಳಿದರು.

ಅವರು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ 52 ಚರ್ಚುಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಶಂಕರಪುರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡುವ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ನಿತ್ಯ ಈ ಬಗ್ಗೆ ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಜಾಗೃತಿವಹಿಸುವುದರೊಂದಿಗೆ ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.ಪ್ರತಿ ವರ್ಷವೂ ವನಮಹೋತ್ಸವ ಆಚರಣೆ ನಡೆಯುತ್ತಿದ್ದು ನೆಟ್ಟ ಗಿಡಗಳು ಎಷ್ಟರ ಮಟ್ಟಿಗೆ ಬದುಕಿವೆ ಎನ್ನುವುದು ಕೂಡ ಮುಖ್ಯ ವಾಗುತ್ತದೆ. ಈ ನಿಟ್ಟಿನಲ್ಲಿ ಕೆಥೊಲಿಕ್‌ ಸಭಾ ನಮ್ಮ ಪರಿಸರ ನಮ್ಮ ಬದುಕು ಎಂಬ ನಿಟ್ಟಿನಲ್ಲಿ ಸ್ಪರ್ಧೆಯನ್ನು ಎಲ್ಲಾ ಚರ್ಚುಗಳಿಗೆ ಸೀಮಿತವಾಗಿ ಆಯೋಜಿಸಿದೆ. ಅದರಂತೆ ನೆಟ್ಟ ಗಿಡವನ್ನು ಪಾಲನೆ ಮಾಡುವುದರೊಂದಿಗೆ ಅದರ ಬೆಳವಣಿಗೆಯ ಕುರಿತು ಕಾಲಕಾಲಕ್ಕೆ ವೀಡಿಯೋ ಮೂಲಕ ಕೇಂದ್ರಿಯ ಸಮಿತಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಗಿಡವನ್ನು ಅತ್ಯುತ್ತಮವಾಗಿ ಪಾಲನೆ ಮಾಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಉಪಸ್ಥೀತರಿದ್ದ ಕೇಂದ್ರಿಯ ಸಮಿತಿಯ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಮಾತನಾಡಿ ಹಸಿರು ಪರಿಸರ ಮರಗಿಡಗಳ ಅಗತ್ಯತೆ ಮತ್ತು ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿ ಹೇಳಿದರು.ಕಾರ್ಯಕ್ರಮದಲ್ಲಿ ಶಂಕರಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅನಿಲ್‌ ಫ್ರಾನ್ಸಿಸ್‌ ಪಿಂಟೊ, ಕೇಂದ್ರಿಯ ಸಮಿತಿಯ ಕೋಶಾಧಿಕಾರಿ ಜೆರಾಲ್ಡ್‌ ರೊಡ್ರಿಗಸ್‌, ಸ್ಥಳೀಯ ಶಂಕರಪುರ ಘಟಕದ ಪದಾಧಿಕಾರಿಗಳು ಉಪಸ್ಥೀತರಿದ್ದರು.ಕೇಂದ್ರಿಯ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ ಸ್ವಾಗತಿಸಿ, ಶಂಕರಪುರ ಘಟಕದ ಕಾರ್ಯದರ್ಶಿ ರೇಶ್ಮಾ ಕಸ್ತಲಿನೊ ವಂದಿಸಿದರು. ಅನಿತಾ ಆರ್‌ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!