ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ಸಾಮರ್ಥ್ಯದ ಸ್ವೈನ್ ಫ್ಲೂ ಜಿ4 ವೈರಸ್ ಪತ್ತೆ!

ವಾಷಿಂಗ್ಟನ್: ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.

ಹೌದು… ಚೀನಾದಲ್ಲಿರುವ ಸಂಶೋಧಕರು ಚೀನಾದಲ್ಲಿ ಸಾಂಕ್ರಾಮಿಕವಾಗಿ ಹರಡಬಲ್ಲ ಸಾಮರ್ಥ್ಯವಿರುವ ಸ್ವೈನ್ ಫ್ಲೂ (ಹಂದಿಜ್ವರ)ದ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಚೀನಾದಲ್ಲಿರುವ ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಈ ವೈರಸ್ ಮನುಷ್ಯರಿಗೂ ಅಂಟಿಕೊಳ್ಳುವ ಸಾಮರ್ಥ್ಯವಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡಿ ಸಾಂಕ್ರಾಮಿಕವಾಗುವ ಭೀತಿ ಇದೆ ಎಂದು  ಚೀನಿ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದ ಕೆಲ ಪ್ರಾಂತ್ಯಗಳಲ್ಲಿರುವ ಹಂದಿಗಳು ಇನ್‌ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜಿ-4 ಎಂಬ ಹೆಸರಿನ ವೈರಸ್‌ ಇದಾಗಿದ್ದು,ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್‌ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿಯೂ ತಗಲುವ ಸಾಧ್ಯತೆ ಇದೆ.

ಈ ಬಗ್ಗೆ  ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‌ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇದರ ಅಧ್ಯಯನ ನಡೆಸಲಾಗಿತ್ತು. ಈದೀಗ ಈ ವೈರಸ್ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. 

ಇನ್ನು ಇದೇ ವೈರಸ್ ಕುರಿತಂತೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವೂ ಕೂಡ ಜಿ 4 ಹೆಸರಿನ ವೈರಸ್‌ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇದು 2009ರಲ್ಲಿ ವಿಶ್ವದೆಲ್ಲೆಡೆ ಬೆಚ್ಚಿ ಬೀಳಿಸಿದ್ದ ಎಚ್‌1ಎನ್‌1ನ ಇನ್ನೊಂದು ರೂಪಾಂತರ ಎಂದು ಉಲ್ಲೇಖಿಸಿದೆ. ಮನುಷ್ಯರಿಗೆ ಸೋಂಕು ತಗುಲಿಸಬಹುದಾದ ಎಲ್ಲಾ ಲಕ್ಷಣಗಳನ್ನೂ ಈ ವೈರಸ್ ಹೊಂದಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!