ವಿದೇಶಿ ಮಹಿಳೆಗೆ ಜನಿಸಿದ ಮಗ ದೇಶ ಭಕ್ತನಾಗಲಾರ: ರಾಹುಲ್ ವಿರುದ್ಧ ಪ್ರಗ್ಯಾ ಸಿಂಗ್ ವಾಗ್ದಾಳಿ

ಭೋಪಾಲ್: ಚೈನಾದೊಂದಿಗಿನ ಮುಖಾಮುಖಿ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನಡೆಯುತ್ತಿರುವ ವಾಕ್ಸಮರ ಮಾತ್ರ ಅಂತ್ಯಗೊಳ್ಳುತ್ತಿಲ್ಲ. ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

‘ಈ ಮಣ್ಣಿನಲ್ಲಿ ಜನಿಸಿದ ವ್ಯಕ್ತಿಯಿಂದ ಮಾತ್ರ ಈ ದೇಶದ ರಕ್ಷಣೆ ಸಾಧ್ಯ’ ಎಂದು ಚಾಣಕ್ಯ ಹೇಳಿದ್ದಾರೆ. ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶ ಭಕ್ತನಾಗಲಾರ ಎಂದು ಪ್ರಗ್ಯಾ ಠಾಕೂರ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ “ನೀವು ಎರಡು ದೇಶಗಳ ಪೌರತ್ವವನ್ನು ಹೊಂದಿದ್ದರೆ, ನಿಮ್ಮಲ್ಲಿ ದೇಶಭಕ್ತಿಯ ಭಾವನೆಗಳು ಹೇಗೆ ಮೂಡುತ್ತವೆ ? ಎಂದು ಬಿಜೆಪಿ ಸಂಸದೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ, ನೀತಿ ಹಾಗೂ ದೇಶಭಕ್ತಿ ಎಂಬುದು ಇಲ್ಲ ಎಂದು ಅವರು ಆರೋಪಿಸಿದ್ದಾರೆ. ಒಮ್ಮೆ ಕಾಂಗ್ರೆಸ್ ಪಕ್ಷ ನೋಡಿದರೆ ಆ ಪಕ್ಷದ ನಾಯಕರಿಗೆ ಹೇಗೆ ಮಾತಾಡಬೇಕು ಎಂಬುದು ಗೊತ್ತಿಲ್ಲ, ಆ ಪಕ್ಷಕ್ಕೆ ನೈತಿಕತೆ, ಧೈರ್ಯ ಅಥವಾ ದೇಶಭಕ್ತಿ ಇಲ್ಲ ಎಂದು ಪ್ರಗ್ಯಾ ಸಿಂಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಕುರಿತು ಬಿಜೆಪಿ ಆಗಾಗ್ಗೆ ಕೆದಕುವುದು ಸಾಮಾನ್ಯವಾಗಿತ್ತು, ಆದರೆ, ಪ್ರಗ್ಯಾ ಸಿಂಗ್ ಠಾಕೂರ್, ರಾಹುಲ್ ಗಾಂಧಿ ಕುರಿತ ಈ ಹೇಳಿಕೆ ತೀವ್ರ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 

ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಜೆ.ಪಿ.ಧಾನೋಪಿಯಾ ಪ್ರಗ್ಯಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಗ್ಯಾ ಸಂಸದ ಸ್ಥಾನಕ್ಕೆ ಅವಮಾನ ತಂದಿದ್ದಾರೆ. ಭಯೋತ್ಪಾದಕ ಪ್ರಕರಣದಲ್ಲಿ ಭಾಗಿಯಾಗಿರುವ ಈ ಸಂಸದೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕುರಿತು ಟೀಕೆ ಮಾಡುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.

ಪ್ರಗ್ಯಾ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕೂಡಲೇ ಆಕೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಧನೋಪಿಯಾ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!