ಕಾಪು: ಹುಟ್ಟುಹಬ್ಬ ಆಚರಿಸುತ್ತಿದ್ದವರಿಗೆ ಚೂರಿ ಇರಿತ
ಕಾಪು ಜೂ.25(ಉಡುಪಿ ಟೈಮ್ಸ್ ವರದಿ): ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಇರಿದು ಜೀವ ಬೆದರಿಕೆ ಹಾಕಿರುವ ಘಟನೆ ಕಾಪುವಿನಲ್ಲಿ ನಡೆದಿದೆ.
ಈ ಬಗ್ಗೆ ಶರತ್ ದೇವಾಡಿಗ ಪೊಲೀಸರಿಗೆ ದೂರು ನೀಡಿದ್ದು ಅದರಂತೆ, ಜೂ.22 ರಂದು, ಶರತ್ ದೇವಾಡಿಗ ಅವರು, ತಮ್ಮ ಗೆಳೆಯ ಸುಕೇಶ್ ಮೆಂಡನ್ ರ ಜನುಮದಿನದ ಕಾರಣ ಇತರ ಸ್ನೇಹಿತರಾದ ಪ್ರೀತಮ್, ಅಭಿರಾಜ್ ಕರ್ಕೇರಾ, ರಂಜನ್, ವಿವೇಕ್ ಅಮೀನ್, ಕವಿರಾಜ್, ಪ್ರಜ್ವಲ್, ಸಚಿನ್, ಮತ್ತು ಹರೀಶ್ ರವರೊಂದಿಗೆ ಕೋಟೆ ಗ್ರಾಮದ ಕಜಕೋಡ್ ಹೊಳೆಯ ಬದಿಗೆ ರಾತ್ರಿ 7:30 ರ ಸುಮಾರಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೆಲ ಸಮಯದ ಬಳಿಕ ಸುಕೇಶ್ನ ಮೊಬೈಲ್ಗೆ ಅಭಿಷೇಕ್ ಎಂಬುವವನು ಕರೆ ಮಾಡಿದ್ದು, ಸುಕೇಶ್ನು ಆ ಕರೆಯನ್ನು ಸ್ವಿಕರಿಸಿರಲಿಲ್ಲ. ನಂತರ ರಾತ್ರಿ 11 ಗಂಟೆ ಸುಮಾರಿಗೆ ಅಭಿಷೇಕ್ನು ಸ್ನೇಹಿತರ ತಂಡ ಇದ್ದ ಜಾಗಕ್ಕೆ ಬಂದು ಅವರ ಬಳಿ ಕಿರಣ ಯಾರು ಅವ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಈ ವೇಳೆ ಶರತ್ ದೇವಾಡಿಗ ಅವರು ನಮಗೆ ಯಾರಿಗೂ ಕಿರಣ ಯಾರೆಂದು ತಿಳಿದಿಲ್ಲ, ನಮ್ಮಲ್ಲಿ ಯಾಕೆ ಕೇಳುತ್ತಿ ಎಂದು ಹೇಳಿದ್ದಾರೆ.
ಈ ವೇಳೆ ಅಭಿಷೇಕನು ಶರತ್ ದೇವಾಡಿಗ ಅವರಿಗೆ ಚೂರಿಯಿಂದ ಇರಿದಿದ್ದಾನೆ. ಸ್ನೇಹಿತರು ಈ ಹಲ್ಲೆಯನ್ನು ತಡೆದಿದ್ದು ಈ ವೇಳೆ ಅಭಿಷೇಕ್ ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.