ಸುಳ್ಯ: ಆನ್ಲೈನ್ ಕ್ಲಾಸ್ ಗೆ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡ ಗ್ರಾಮಸ್ಥರು

ಸುಳ್ಯ, ಜೂ.25: ಇಂಟರ್ನೆಟ್ ನ ಸಮಸ್ಯೆಯಿಂದ ಹಳ್ಳಿಗಳಲ್ಲಿ ಅನೇಕ ಮಕ್ಕಳು ಶಿಕ್ಷಣದಿದ ವಂಚಿತರಾಗುತ್ತಿದ್ದಾರೆ. ಅದೇ ರೀತಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿ ರುವ ವಿಚಾರ ರಾಷ್ಟ್ರಾದ್ಯಾಂತ ಸುದ್ದಿ ಮಾಡಿತ್ತು. ಭಾರೀ ಗಾಳಿ ಮಳೆಗೆ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಗುಡ್ಡದ ಮೇಲಿನ ರಸ್ತೆಯಲ್ಲಿ ಇಡೀ ದಿನ ಕೂತು ಆನ್ ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದರು. 

ಭಾರೀ ಮಳೆಯ ನಡುವೆ ವಿದ್ಯಾರ್ಥಿಯ ಆನ್ಲೈನ್ ಕ್ಲಾಸ್ ಗೆ ಸ್ವತಃ ಪೋಷಕರು ಛತ್ರಿಯ ಆಸರೆ ನೀಡುತ್ತಿದ್ದು, ಭಾರೀ ಗಾಳಿ ಮಳೆಗೆ ರಸ್ತೆಯಲ್ಲಿಯೇ ನಿಂತು ಪಾಠ ಕೇಳಬೇಕಾದ ಅನಿವಾರ್ಯತೆ ಇತ್ತು. ಮಕ್ಕಳ ಈ ಸಂಕಷ್ಟದ ಒಂದು ಫೋಟೋ ಭಾರೀ ಸಂಚಲನ ಮೂಡಿಸಿತ್ತು. ಇದೀಗ ತಮ್ಮ ಗ್ರಾಮದ ಮಕ್ಕಳ ನೆಟ್ವರ್ಕ್ ಸಮಸ್ಯೆ ನಿವಾರಿಸಲು ಊರಿನ ಜನರೇ ಮುಂದಾಗಿದ್ದು, ತಮ್ಮ ಗ್ರಾಮಕ್ಕೆ  ಪಿಎಂ ವಾಣಿ ಸೌಲಭ್ಯ ಬರುವಂತೆ ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಮಿಲದಲ್ಲಿ ಈಗ ಪಿಎಂ ವಾಣಿ ಚಾಲನೆಯಾಗಿದ್ದು, ಏಕಾನೆಟ್‌ ಎಂಬ ಹೆಸರಿಲ್ಲಿ ಇಲ್ಲಿ ನೆಟ್ವರ್ಕ್‌ ಲಭ್ಯವಾಗುತ್ತಿದೆ.

ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್‌ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾಗಿದ್ದಾರೆ. ಇಲಾಖೆಗಳನ್ನು, ವ್ಯವಸ್ಥೆಗಳನ್ನು ದೂರುತ್ತಾ ಕೂರುವ ಬದಲು ಇರುವ ವ್ಯವಸ್ಥೆಗಳನ್ನು  ಹೇಗೆ ಬಳಕೆ ಮಾಡಬಹುದು ಹಾಗೂ ಸುಧಾರಿಸಬಹುದು ಎಂದು ಈ ಯುವಕರಿಬ್ಬರು ಯೋಚಿಸಿದ್ದಾರೆ. ತಕ್ಷಣವೇ ಇಲಾಖೆಗಳಿಂದ ಅನುಮತಿ ಪಡೆದು ಸುಳ್ಯದ ಕಮಿಲದಲ್ಲಿ ಈ ವ್ಯವಸ್ಥೆ ಒದಗಿಸಲು ಮುಂದಾಗಿದ್ದು, ಸದ್ಯ ಕಮಿಲದಲ್ಲಿ ಬಿಎಸ್‌ಎನ್‌ಎಲ್‌ ಭಾರತ್‌ ಏರ್‌ ಫೈಬರ್‌ ಮೂಲಕ ಇಂಟರ್ನೆಟ್‌ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್‌ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ. 

ಇನ್ನು ಕೇಂದ್ರ ಸರಕಾರವು ಸಾರ್ವಜನಿಕ ವೈಫೈ ನೀಡಲು ಪಿಎಂ ವಾಣಿ ಎಂಬ ಯೋಜನೆಯಲ್ಲಿ ಕಳೆದ ಡಿಸೆಂಬರ್‌ ನಲ್ಲಿ ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ದೇಶದ ಹಲವು ಕಡೆಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಕೂಡ ಸೂಚಿಸಿತ್ತು. ಈ ನೆಟ್ವರ್ಕ್‌ ಗೆ ಏಕಾನೆಟ್‌ ಎಂಬ ಹೆಸರಿಡಲಾಗಿದೆ. ಏಕೆOದರೆ ಒಂದು ಹಾಗೂ ನೆಟ್‌ ಎಂದರೆ ನೆಟ್ವರ್ಕ್‌ ಎಂಬ ಅರ್ಥ ಒಳಗೊಂಡಿದ್ದು, ಒಂದು ನೆಟ್ವರ್ಕ್‌ ಎಲ್ಲರಿಗಾಗಿ ಎಂಬ ಸಂದೇಶ ಇದರ ಹಿಂದಿದೆ. ಸೇವಾ ಉದ್ದೇಶ ಇದಾದರೂ ಇದಕ್ಕೆ ಬೇಕಾದ ಇಂಟರ್ನೆಟ್‌ ಹಾಗೂ ಇತರ ಉಪಕರಣಗಳಿಗೆ ವೆಚ್ಚಗಳಾಗುವುದರಿಂದ ಬಳಸುವ ಡಾಟಾಗಳ ಮೇಲೆ ಕನಿಷ್ಟ ದರ ವಿಧಿಸಲಾಗುತ್ತದೆ.

ಸದ್ಯ ಸುಮಾರು 2000ಚದರ ಅಡಿಯಲ್ಲಿ ಈ ಸಿಗ್ನಲ್‌ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್‌ ಅಗತ್ಯ ಇದ್ದವರಿಗೆ, ವರ್ಕ್‌ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈಫೈ ಬಳಕೆ ಮಾಡಬಹುದು. ಈ ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳು ಇದ್ದು ನೆಟ್ವರ್ಕ್ ಲೋಪದೋಷಗಳ ಕಡೆಗೂ ಗಮನಹರಿಸಲಾಗುತ್ತಿದೆ.
ಟೆಲಿಕಾಂ ಇಲಾಖೆಗಳ ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ  ವೇಗದ ಇಂಟರ್ನೆಟ್‌ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕೈ ಕೊಡುವ ಸಂದರ್ಭ ನೆಟ್ವರ್ಕ್‌ ಸಮಸ್ಯೆ ಹೆಚ್ಚಾಗುತ್ತದೆ, ಆದರೆ ಭಾರತ್‌ ಏರ್‌ ಫೈಬರ್‌ ಅಥವಾ ಫೈಬರ್‌ ವ್ಯವಸ್ಥೆಗಳು ಪ್ರತ್ಯೇಕ ಬ್ಯಾಟರಿಯಿಂದ ಚಾಲೂಗೊಳ್ಳುವ ಕಾರಣದಿಂದ ಸದ್ಯಕ್ಕೆ ಬಿ ಎಸ್‌ ಎನ್‌ ಎಲ್‌ ಇತರ ಸಮಸ್ಯೆಗಳು ಮಾತ್ರ ಅಡಚಣೆಗೆ ಕಾರಣವಾದೀತು ಎಂಬ ನಂಬಲಾಗಿದೆ.ಈ ವೈಫೈ ತಾಲೂಕಿನ ವಿವಿಧ ಕಡೆಗಳಲ್ಲಿ ಒಂದೇ ಹೆಸರಿನಲ್ಲಿ ಅಳವಡಿಕೆ ಯಾದರೆ ರೋಮಿಂಗ್‌ ಮೂಲಕವೂ ಪಡೆಯಲು ಸಾಧ್ಯವಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!