ಲಸಿಕೆಯಿಂದ ಬಂಜೆತನ ಉಂಟಾಗುತ್ತದೆ ಎನ್ನುವುದು ತಪ್ಪು ಕಲ್ಪನೆ : ಕೇಂದ್ರ ಸರ್ಕಾರ
ನವದೆಹಲಿ: ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವುದಿಲ್ಲ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿ ಫಲವತ್ತತೆಯ ಮೇಲೆ ಲಸಿಕೆಗಳು ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ಕಲ್ಪನೆ ಎಂದು ಕೇಂದ್ರ ಸೋಮವಾರ ಸ್ಪಷ್ಟಪಡಿಸಿದೆ.
ಇಂತಹ ಮೂಢನಂಬಿಕೆಗಳು ಹಾಗೂ ಕಾಲ್ಪನಿಕ ಕಥೆಗಳು ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಂದ ಕೇಳಿಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಲಸಿಕಾ ಅಭಿಯಾನ ಸಂದರ್ಭದಲ್ಲಿ ಸಮುದಾಯದಲ್ಲಿ ಇಂತಹ ತಪ್ಪು ಸಂದೇಶ ಮತ್ತು ವದಂತಿಗಳು ಹರಡುತ್ತಿರುವುದನ್ನು ಗಮನಿಸಲಾಗಿದೆ. ಈ ಹಿಂದೆ ಪೋಲಿಯೊ ಮತ್ತು ದಡಾರ-ರುಬೆಲ್ಲಾ ಲಸಿಕೆ ಅಭಿಯಾನದ ವೇಳೆ ಸಹ ಇಂತಹ ವದಂತಿಗಳು ಹರಡಿತ್ತು.
ಲಭ್ಯವಿರುವ ಯಾವುದೇ ಲಸಿಕೆಗಳು ಫಲವತ್ತತೆ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಎಲ್ಲಾ ಲಸಿಕೆಗಳು ಮತ್ತು ಅವುಗಳ ಡೋಸ್ ಗಳನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದೆ. ಅಲ್ಲದೆ ನಂತರ ಮಾನವರಲ್ಲಿ ಅಂತಹ ಯಾವುದೇ ಅಡ್ಡ ಪರಿಣಾಮಗಳಿವೆಯೇ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಲಸಿಕೆಗಳು ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿದ ನಂತರವೇ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಕೊರೋನಾಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಎಲ್ಲಾ ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡಲು ಶಿಫಾರಸು ಮಾಡಿದೆ, ಲಸಿಕೆ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಾಮ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.