ಶಿರ್ವ: ಬಿಜೆಪಿ ಮುಖಂಡ, ಸಾಮಾಜಿಕ ಕಾರ್ಯಕರ್ತ ಸುನೀಲ್ ಕಬ್ರಾಲ್ ನಿಧನ

ಶಿರ್ವ (ಉಡುಪಿ ಟೈಮ್ಸ್ ವರದಿ): ಕಾಂಗ್ರೆಸ್ ನಿಂದ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಸಾಮಾಜಿಕ ಕಾರ್ಯಕರ್ತ ಉದ್ಯಮಿ ಸುನೀಲ್ ಕಬ್ರಾಲ್ (52) ಕೋವಿಡ್ ಗೆ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ, ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ನ ಸ್ಥಾಪಕ ಅಧ್ಯಕ್ಷರಾಗಿರುವ ಸುನಿಲ್ ಕಬ್ರಾಲ್ ಇಂದು ನಿಧನರಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಸುನೀಲ್, ಕಾಂಗ್ರೆಸ್ ಸರಕಾರ ಅಧಿಕಾರ ದಲ್ಲಿದ್ದಾಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 2 ವರ್ಷಗಳ ಹಿಂದೆ ನಿಧನರಾಗಿದ್ದ ಫಾ. ಮಹೇಶ್ ಅಭಿಮಾನಿ ಬಳಗದ ಮುಂಚೂಣಿ ಮುಖಂಡರಾಗಿದ್ದು, ಹಲವು ಹೋರಾಟದಲ್ಲಿ ಭಾಗಿಯಾಗಿದ್ದರು. ಒಂದು ಅವಧಿಗೆ ಕಾಂಗ್ರೆಸ್ ಬೆಂಬಲಿತ ಶಿರ್ವ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, ಶಿರ್ವ ಆರೋಗ್ಯ ಮಾತಾ ದೇವಾಲಯದ ಪಾಲನಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಂಘಟನಾ ಚತುರರಾಗಿದ್ದ ಸುನೀಲ್ ಕಬ್ರಾಲ್, ಪಕ್ಷಾತೀತವಾಗಿ ಶಿರ್ವ ಮತ್ತು ಆಸುಪಾಸಿನಲ್ಲಿ ಯಾವುದೇ ಸಾಮಾಜಿಕ ಕೆಲಸಕ್ಕೂ ಸೈ ಎನಿಸಿ ಕೊಂಡಿದ್ದರು. ರೋಟರಿ ಕ್ಲಬ್ ಶಿರ್ವ ಇದರ ಸುವರ್ಣ ಮಹೋತ್ಸವದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕೆಲವು ಸಮಯಗಳ ಹಿಂದೆ ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿದ್ದ ಅವರು ಕಳೆದ ವರ್ಷ ನಡೆದ ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ಇವರ ಆಪ್ತರಾಗಿದ್ದ ಕ್ರೊರ್ನಾಡ್ ಕಾಸ್ತಲಿನೊ ಶಿರ್ವ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. 

ಕೋವಿಡ್ ಸೋಂಕಿನ ಬಗ್ಗೆ ಜನರಿಗೆ ಎಚ್ಚರಿಸುತ್ತಿದ್ದ ಸುನಿಲ್, ತಾವೇ ಸ್ವತಃ ಕೋವಿಡ್ ಗೆ ಬಲಿಯಾದದ್ದು ವಿಪರ್ಯಾಸ. ಮೃತರು ಪತ್ನಿ ಬೊನಿಟ ಮತ್ತು ಅಪಾರ ಬಂಧು-ಬಳಗದವರನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಗೌರವಾಧ್ಯಕ್ಷ ರೋನಾಲ್ಡ್ ಮನೋಹರ ಕರ್ಕಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

4 thoughts on “ಶಿರ್ವ: ಬಿಜೆಪಿ ಮುಖಂಡ, ಸಾಮಾಜಿಕ ಕಾರ್ಯಕರ್ತ ಸುನೀಲ್ ಕಬ್ರಾಲ್ ನಿಧನ

  1. Very much sorry to hear the sad demise of Sunil Kabral.A very helpful person, social activist and a friend.May the Lord grant him eternal peace and bliss.Heartlelt condolences to the bereaved family.

  2. Heartfelt condolences to the famiy of sunil cabral . Ivan dsouza you have done a great job in organising the final journey of sunil .

Leave a Reply

Your email address will not be published. Required fields are marked *

error: Content is protected !!