ಅಡುಗೆ ಎಣ್ಣೆಯ ಬೆಲೆಯೇಕೆ ಏರುತ್ತಿದೆ? ನಾವೇನು ಮಾಡಬಹುದು…?
ಹಣದುಬ್ಬರ ಅಥವಾ ಬೆಲೆಯೇರಿಕೆ ಎನ್ನುವುದು ಇಂದು ನಮ್ಮ ಸಮಾಜವನ್ನ ಕಾಡುತ್ತಿರುವ ಹತ್ತಾರು ಸಮಸ್ಯೆಗಳಲ್ಲಿ ಪ್ರಮುಖವಾಗಿದೆ. ಸಮಾಜದಲ್ಲಿ ಲಭ್ಯವಿರುವ ಒಟ್ಟು ಸೇವೆ ಮತ್ತು ಸರಕಿಗಿಂತ (ಗೂಡ್ಸ್ ಅಂಡ್ ಸರ್ವಿಸ್) ಹಣದ ಹರಿವು ಬಹಳ ಹೆಚ್ಚಿದ್ದರೆ ಅಂತಹ ಪರಿಸ್ಥಿತಿಗೆ ಹಣದುಬ್ಬರ ಎನ್ನಬಹುದು. ಇನ್ನೂ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಸರುಕು ಮತ್ತು ಸೇವೆಯ ಬೆಲೆ ಹೆಚ್ಚುತ್ತಲೇ ಹೋಗುತ್ತಿದ್ದರೆ ಅದನ್ನು ಹಣದುಬ್ಬರ ಎನ್ನುತ್ತೇವೆ. ಒಟ್ಟಿನಲ್ಲಿ ವಸ್ತುವಿನ ಬೆಲೆ ಏರುಗತಿಯಲ್ಲಿದ್ದು ತನ್ನ ನೈಜ್ಯ ಸಹಜ ಬೆಲೆಗಿಂತ ಅಧಿಕವಾಗಿ ಮಾರಾಟಗೊಳ್ಳುತ್ತಿದ್ದರೆ ಅದು ಹಣದುಬ್ಬರ ಎನಿಸಿಕೊಳ್ಳುತ್ತದೆ.
ಬಜೆಟ್ ಡೆಫಿಸಿಟ್ ಅಂದರೆ ಸರಕಾರದ ಆದಾಯ ಮತ್ತು ಖರ್ಚಿನ ನಡುವಿನ ಅಂತರ. ಖರ್ಚು ಹೆಚ್ಚು ಆದಾಯ ಕಡಿಮೆ. ಇದನ್ನು ಸರಿದೂಗಿಸಲು ಹೆಚ್ಚು ಹಣ ಮುದ್ರಿಸುವುದರಿಂದ ಹಣದುಬ್ಬರ ಉಂಟಾಗುತ್ತದೆ. ಸರುಕು ಮತ್ತು ಸೇವೆ ಕಡಿಮೆಯಿದ್ದು ಅದಕ್ಕೆ ಬೇಡಿಕೆ ಹೆಚ್ಚಿದ್ದರೆ ಕೂಡ ಹಣದುಬ್ಬರ ಹೆಚ್ಚಾಗುತ್ತೆ. ಸಮಾಜಕ್ಕೆ ಅಥವಾ ಜನರಿಗೆ ಅವಶ್ಯಕತೆಗೂ ಮೀರಿದ ಹಣವನ್ನು ಬ್ಯಾಂಕುಗಳು ಸಾಲದ ರೂಪದಲ್ಲಿ ನೀಡುವುದರಿಂದಲೂ ಹಣದುಬ್ಬರ ಹೆಚ್ಚಾಗುತ್ತೆ. ವಸ್ತು ಒಂದನ್ನು ತಯಾರಿಸಲು ಹೆಚ್ಚು ವ್ಯಯ (ಉದಾಹರಣೆ ಪೆಟ್ರೋಲ್) ಆಗುವುದರಿಂದ ಕೂಡ ಹಣದುಬ್ಬರ ಉಂಟಾಗುತ್ತದೆ. ಯಾವುದಾದರೂ ವಸ್ತುವಿಗೆ ನಾವು ಇತರ ದೇಶಗಳನ್ನ ಅವಲಂಬಿಸಿದ್ದರೆ ಮತ್ತು ಆ ವಸ್ತುವಿನ ಉತ್ಪಾದನೆಯಲ್ಲಿ ಕುಂಠಿತವಾದರೆ ಕೂಡ ಹಣದುಬ್ಬರ ಹೆಚ್ಚಾಗುತ್ತದೆ. ಹೀಗೆ ಸಾಮಾನ್ಯ ಪರಿಸ್ಥಿತಿಯಿಂದ ಬಿನ್ನ ಸ್ಥಿತಿ ಹಣದುಬ್ಬರ ಉಂಟುಮಾಡುತ್ತದೆ ಎಂದು ಹೇಳಬಹುದು.
ಇವತ್ತಿನ ಪ್ರಮುಖ ಪ್ರಶ್ನೆ ಅಡುಗೆಗೆ ಬಳಸುವ ತೈಲದ ಬೆಲೆಯೇಕೆ ಆಕಾಶ ತಲುಪಿದೆ?
ಗಮನಿಸಿ ಭಾರತ ಇತರ ದೇಶಗಳಿಂದ ಪ್ರಮುಖವಾಗಿ ಆಮದು (ತರಿಸಿಕೊಳ್ಳುವುದು) ಮಾಡಿಕೊಳ್ಳುವ ವಸ್ತುಗಳ ಪೈಕಿ ಮೊದಲನೆಯ ಸ್ಥಾನದಲ್ಲಿ ಕಚ್ಚಾ ತೈಲವಿದೆ, ಎರಡನೇ ಸ್ಥಾನದಲ್ಲಿ ಬಂಗಾರ ಪ್ರತಿಷ್ಠಾಪನೆಯಾಗಿದೆ. ಮೂರನೇ ಸ್ಥಾನವನ್ನ ಅಲಂಕರಿಸಿರುವುದು ನಮ್ಮ ಕುಕಿಂಗ್ ಆಯಿಲ್ ಅಥವಾ ಅಡುಗೆ ತೈಲ. ಅಂದರೆ ನಮ್ಮಲ್ಲಿ ಉಪಯೋಗಿಸಲು ಬೇಕಾಗುವ ತೈಲದ ಬಹುಪಾಲು ಬೇಡಿಕೆಯನ್ನ ಪೂರೈಸಲು ನಾವು ಇತರ ದೇಶದ ಮೇಲೆ ಅವಲಂಬಿತವಾಗಿದ್ದೇವೆ. 140 ಕೋಟಿಗೂ ಹೆಚ್ಚಿರುವ ಭಾರತೀಯರ ಅಡುಗೆ ಮನೆಯಲ್ಲಿ ನಿತ್ಯವೂ ಬಳಸುವ ಎಣ್ಣೆಯಲ್ಲಿ ಪ್ರಮುಖವಾದದ್ದು ಪಾಮ್ ಆಯಿಲ್. ಇದನ್ನ ಮಲೇಶಿಯಾ ಮತ್ತು ಇಂಡೋನೇಷ್ಯಾ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತೇವೆ. ನಿಮಗೆಲ್ಲಾ ತಿಳಿದಿರಲಿ, ನಮಗೆ ದಿನಕ್ಕೆ ನೂರು ಲೀಟರ್ ಎಣ್ಣೆ ಬೇಕಾಗುತ್ತದೆ ಎಂದರೆ ಇದರ ಮೂವತ್ತು ಪ್ರತಿಶತ ಅಂದರೆ ಕೇವಲ ಮೂವತ್ತು ಲೀಟರ್ ಎಣ್ಣೆಯನ್ನ ಮಾತ್ರ ನಾವು ಭಾರತದಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. ಇದರ ಅರ್ಥ ಉಳಿದ 70 ಪ್ರತಿಶತ ಬೇಡಿಕೆಯನ್ನ ಪೂರೈಸಲು ನಾವು ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಹೀಗೆ ನೂರು ಲೀಟರ್ ಅಡುಗೆ ತೈಲ ಖರ್ಚಾದರೆ ಅದರಲ್ಲಿ 65 ಲೀಟರ್ ಪಾಮ್ ಆಯಿಲ್ ಇರುತ್ತದೆ. ಅಂದರೆ ನಾವು, ಭಾರತೀಯರು ಹೆಚ್ಚಾಗಿ ಅಡುಗೆಗೆ ಬಳಸುವುದು ಪಾಮ್ ಆಯಿಲ್. ಸೋಯಾ ಆಯಿಲ್ ಮತ್ತು ಸೂರ್ಯಕಾಂತಿ ಎಣ್ಣೆ ಕ್ರಮವಾಗಿ 20 ರಿಂದ 15 ಪ್ರತಿಶತ ಮನೆಗಳಲ್ಲಿ ಬಳಸುತ್ತಾರೆ.
ಅಡುಗೆ ಎಣ್ಣೆ ಬೆಲೆಯೇರಿಕೆಗೆ ಪ್ರಮುಖ ಕಾರಣಗಳನ್ನ ಹೀಗೆ ಪಟ್ಟಿ ಮಾಡಬಹುದು: ಉತ್ಪಾದನೆಯಲ್ಲಿ ಕುಸಿತ: ಕೊರೋನ ಕಾರಣದಿಂದ ಪಾಮ್ ಆಯಿಲ್ ಉತ್ಪಾದನೆಯಲ್ಲಿ ಕುಸಿತವಾಗಿದೆ. ಇದರ ಜೊತೆಗೆ ಸೋಯಾ ಆಯಿಲ್ ಉತ್ಪಾದನೆಯಲ್ಲಿ ಕೂಡ ಕುಸಿತ ಕಂಡಿದೆ. ಯಾವಾಗ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗುತ್ತದೆ ಆಗ ಸಾಮಾನ್ಯವಾಗೇ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಈ ನಿಯಮದ ಪ್ರಕಾರ ಜಾಗತಿಕ ಮಟ್ಟದಲ್ಲಿ ಕುಕಿಂಗ್ ಆಯಿಲ್ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದೆ.
ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ: ಕಚ್ಚಾ ತೈಲದ ಬೆಲೆ 2014 ರಿಂದ ಬಹಳಷ್ಟು ಕಡಿಮೆಯಿತ್ತು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಬ್ಯಾರೆಲ್ಗೆ 15/2೦ ಡಾಲರ್ ನಷ್ಟು ಹೆಚ್ಚಾಗಿದೆ. ಒಮ್ಮೆ ತೈಲ ಬೆಲೆ ಹೆಚ್ಚಾದರೆ ಅದು ಚೈನ್ ಲಿಂಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ನೇರವಾಗಿ ಇದು ಸಾರಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಸಾರಿಗೆ ವೆಚ್ಚದಲ್ಲಿ ಹೆಚ್ಚಳವಾಗುತ್ತದೆ. ಕೊನೆಗೆ ಎಲ್ಲಾ ಹೆಚ್ಚಾದ ವೆಚ್ಚವನ್ನ ಗ್ರಾಹಕನ ಕೊರಳಿಗೆ ಕಟ್ಟುವುದರಿಂದ ಕುಕಿಂಗ್ ತೈಲ ಬೆಲೆ ದುಪ್ಪಟ್ಟಾಗಿದೆ.
ಕಮಾಡಿಟಿ ಮಾರ್ಕೆಟ್ನಲ್ಲಿನ ಹುಚ್ಚಾಟಗಳು: ನಿಮಗೆಲ್ಲಾ ತಿಳಿದಿರಲಿ, ಹೇಗೆ ಷೇರು ಮಾರುಕಟ್ಟೆ ಅಸ್ತಿತ್ವದಲ್ಲಿದೆ ಹಾಗೆಯೇ ಕಮಾಡಿಟಿ ಅಥವಾ ಪದಾರ್ಥಗಳನ್ನ ಟ್ರೇಡ್ ಮಾಡಲು ಕೂಡ ಮಾರುಕಟ್ಟೆಯಿದೆ. ಯಾವಾಗ ಆಯಿಲ್ ಸೀಡ್ಸ್ ಗಳ ಉತ್ಪಾದನೆಯಲ್ಲಿ ಕುಸಿತ ಕಂಡಿದೆ ಎನ್ನುವ ಸುಳಿವು ಸಿಕ್ಕಿತು ಆ ಕ್ಷಣದಿಂದ ದಲ್ಲಾಳಿಗಳ ಕಾರುಬಾರು ಶುರುವಾಯ್ತು. ಈ ಮಾರುಕಟ್ಟೆಯಲ್ಲಿ ಈ ತೈಲ ಬೀಜಗಳ ಫ್ಯೂಚರ್ ಬೆಲೆಯಲ್ಲಿ ಸಿಕ್ಕಾಪಟ್ಟೆ ಹೆಚ್ಚಳವಾಯ್ತು, ಹೀಗಾಗಿ ಇನ್ನಷ್ಟು ಲಾಭದ ಆಸೆಯಿಂದ ಈ ಬೀಜಗಳನ್ನ ಮಾರುಕಟ್ಟೆಗೆ ಬಿಡದೆ ಒಂದು ಕಡೆ ಇದನ್ನ ಶೇಖರಿಸಿ ಇಡಲಾಗುತ್ತದೆ. ಹೀಗೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಕೊರತೆಯನ್ನ ಸೃಷ್ಟಿಸಲಾಗುತ್ತದೆ. ಜಾಗತಿಕ ಮಟ್ಟದ ಲಾಬಿಗಳು, ಡೊಮೆಸ್ಟಿಕ್ ಲಾಬಿಗಳು ಹೀಗೆ ಹತ್ತಾರು ದಲ್ಲಾಳಿಗಳ ನಡುವಿನ ಒಪ್ಪಂದ ಗ್ರಾಹಕನ ಜೇಬಿಗೆ ಕತ್ತರಿಯನ್ನ ಹಾಕುತ್ತಿವೆ.
ಹೆಚ್ಚಾಗಿರುವ ಬಳಕೆ: ಸರಾಸರಿ ಪ್ರತಿ ಭಾರತೀಯ ಪ್ರಜೆ ವರ್ಷದಲ್ಲಿ 16 ಲೀಟರ್ ಅಡುಗೆ ಎಣ್ಣೆಯನ್ನ ಸೇವನೆ ಮಾಡುತ್ತಿದ್ದು, ಇದರ ಸಂಖ್ಯೆ 20 ಲೀಟರ್ ಎಣ್ಣೆಗೆ ತಲುಪಿದೆ. ಇದು ವಾರ್ಷಿಕ 26 ರಿಂದ 30 ಮಿಲಿಯನ್ ಟನ್ ಹೆಚ್ಚಿನ ಬೇಡಿಕೆಯನ್ನ ಸೃಷ್ಟಿಸುತ್ತದೆ. ಈ ಮೇಲಿನ ಅಂಕಿ-ಅಂಶಗಳು ಕೂಡ ಇಂದಿನ ದಿನಕ್ಕೆ ಬಹಳಷ್ಟು ವ್ಯತ್ಯಾಸವನ್ನ ಕಂಡಿರುತ್ತದೆ. ಏಕೆಂದರೆ ಕೊರೋನ ಮುಂಚಿನ ಅಂಕಿಅಂಶವಿದು, ಕೊರೋನ ವೇಳೆಯಲ್ಲಿ ಇದರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗಿರುವ ಸಾಧ್ಯತೆಯನ್ನ ಅಲ್ಲಗೆಳೆಯುವಂತಿಲ್ಲ.
ಹೆಚ್ಚಾಗಿರುವ ಬೆಲೆಯೇರಿಕೆಗೆ ನಾವೇನು ಮಾಡಬಹುದು?
ಪರ್ಯಾಯ ಎಣ್ಣೆಯನ್ನ ಉಪಯೋಗಿಸುವುದು : ನಮಗೆಲ್ಲಾ ತಿಳಿರುವಂತೆ ಪಾಮ್ ಆಯಿಲ್ ಅತಿ ಹೆಚ್ಚು ಭಾರತೀಯರು ಸೇವಿಸಿವ ಎಣ್ಣೆಯಾಗಿದೆ, ಇದಕ್ಕೆ ಬದಲಾಗಿ ಅಕ್ಕಿ ಎಣ್ಣೆ (ಅಕ್ಕಿತವುಡು ಎಣ್ಣೆ), ಹತ್ತಿ ಎಣ್ಣೆಯಂತಹ ಎಣ್ಣೆಗಳನ್ನ ಬಳಸಲು ಶುರು ಮಾಡಿದರೆ, ಸ್ವಲ್ಪವಾದರೂ ಪಾಮ್ ಆಯಿಲ್ ಬೆಲೆಯಲ್ಲಿ ಕಡಿಮೆಯಾಗಬಹುದು.
ಮಿತ ಬಳಕೆಯ ಮಂತ್ರವನ್ನ ಜಪಿಸುವುದು: ಪ್ರತಿ ತಿಂಗಳು ಕನಿಷ್ಟ ಒಂದು ಲೀಟರ್ ಎಣ್ಣೆಯನ್ನ ಬಳಸುವುದು ಕಡಿಮೆ ಮಾಡಿದರೂ ಸಾಕು ಅದು ನಾವು ಇಂದಿಗೆ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಇದರಿಂದ ನಮ್ಮ ಜೇಬಿಗೆ ಹೆಚ್ಚಿನ ಉಳಿತಾಯವಾಗದೆ ಇರಬಹುದು, ಆದರೆ ಜಾಗತಿಕ ಮಟ್ಟದಲ್ಲಿ ಲಾಬಿಗೆ ಮಣಿಯದೆ ನಿಲ್ಲುವ ಶಕ್ತಿಯನ್ನ ನಾವು ಭಾರತಕ್ಕೆ ನೀಡಬಹುದು. ಯಾವಾಗ ಅಡುಗೆ ಎಣ್ಣೆಯ ಮೇಲಿನ ಬೇಡಿಕೆ ಕುಸಿಯುತ್ತದೆ, ಆಗ ಭಾರತ ಹೆಚ್ಚು ಬಾರ್ಗೈನ್ ಮಾಡುವ ಶಕ್ತಿಯನ್ನ ಪಡೆದುಕೊಳ್ಳುತ್ತದೆ. ನಾವು ಹೆಚ್ಚು ಬೇಡಿಕೆ ಸೃಷ್ಟಿಸಿದರೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶಕ್ಕೆ ಅಷ್ಟು ಕಷ್ಟ ಹೆಚ್ಚಾಗುತ್ತದೆ. ಇದೆ ಮಾತನ್ನ ನಾವು ಎಲ್ಲಾ ತೈಲಗಳಿಗೆ ಕೂಡ ಅನ್ವಯಿಸಬಹುದು.
ಸರಕಾರವೇನು ಮಾಡಬೇಕು?
ಸಬ್ಸಿಡಿ ನೀಡಬೇಕು: ಕೇಂದ್ರ ಸರಕಾರ ಅಡುಗೆ ಎಣ್ಣೆಯನ್ನ ನಿಯಂತ್ರಿತ ಬೆಲೆಯಲ್ಲಿ ಜನತೆಗೆ ನೀಡಲು ಚಿಂತನೆ ಮಾಡುತ್ತಿದೆ. ಯಾವುದೇ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೊದಲು ಸರಕಾರ ಅತ್ಯಂತ ಬೇಗ ಅಡುಗೆ ಎಣ್ಣೆಯ ಮೇಲಿನ ಬೆಲೆಯನ್ನ ಕಡಿಮೆ ಮಾಡಬೇಕಾಗಿದೆ. ಗಮನಿಸಿ ಕಳೆದ ನಾಲ್ಕಾರು ವರ್ಷದಿಂದ ಜನರ ಆದಾಯದಲ್ಲಿ ಕುಸಿತ ಕಂಡು ಬರುತ್ತಿದೆ. ಅದಕ್ಕೆ ಕುಸಿದ ಬಡ್ಡಿ ದರದ ಜೊತೆಗೆ ಕೊರೋನ ಕೆಲಸ ಕಡಿತವನ್ನ ಕೂಡ ಮಾಡಿದೆ. ಇದರ ಜೊತೆಗೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಎಲ್ಲಾ ಮೂಲಭೂತ ಪದಾರ್ಥಗಳ ಬೆಲೆಯನ್ನ ಹೆಚ್ಚಿಸಿದೆ. ಗಾಯದ ಮೇಲೆ ಬರೆಯ ಎಳೆದಂತೆ ಕುಕಿಂಗ್ ಆಯಿಲ್ ಮೇಲಿನ ಬೆಲೆ ಹೆಚ್ಚಳ ಜನರನ್ನ ಹೈರಾಣಾಗಿಸಿದೆ. ಹೀಗಾಗಿ ಆದಷ್ಟೂ ಬೇಗ ಇದರ ಬೆಲೆಯನ್ನ ಕಡಿಮೆ ಮಾಡುವುದು ಸರಕಾರ ಮಾಡಬೇಕಾಗಿರುವ ಪ್ರಥಮ ಪ್ರಯತ್ನ.
ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಬೇಕು: ಗಮನಿಸಿ ನಮ್ಮ ದೇಶದಲ್ಲಿನ ರೈತರು ಅಕ್ಕಿ ಮತ್ತು ಗೋಧಿಯನ್ನ ಬೆಳೆಯಲು ತೋರಿಸುವ ಉತ್ಸಾಹ ಈ ರೀತಿಯ ಎಣ್ಣೆ ಕಾಳುಗಳನ್ನ ಬೆಳೆಯುವುದರಲ್ಲಿ ತೋರಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸರಕಾರ ಇಂಡೋನೇಶಿಯಾ ಮತ್ತು ಮಲೇಶಿಯಾ ದೇಶಗಳಿಂದ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಎಣ್ಣೆಯನ್ನ ತರಿಸಿಕೊಳ್ಳುತ್ತಿರುವುದು. ನಮ್ಮ ರೈತರು ಅಲ್ಲಿನ ಬೆಲೆಗೆ ಇದನ್ನ ತಯಾರಿಸಲು ಸಾಧ್ಯವಿಲ್ಲದಿರುವುದು ಇಂದಿನ ಸ್ಥಿತಿಗೆ ಕಾರಣ. ಎಕಾನಮಿ ಆಫ್ ಲಾರ್ಜ್ ಸ್ಕೇಲ್ ಎನ್ನುವ ಒಂದು ಪದವನ್ನ ನಾವು ಬಳಸುತ್ತೇವೆ. ಇದರ ಪ್ರಕಾರ, ದಿನಗಳೆದಂತೆ ಹೆಚ್ಚು ಹೆಚ್ಚು ಇದರ ಉತ್ಪಾದನೆ ಮಾಡುವುದಕ್ಕೆ ಶುರುವಾದ ಮೇಲೆ ಬೆಲೆಯಲ್ಲಿ ಇಳಿತ ತಾನಾಗೇ ಆಗುತ್ತದೆ. ಭಾರತದಲ್ಲಿ ನಮಗೆ ಬೇಕಾದ ಎಣ್ಣೆಯ ಕೇವಲ 3೦ ಪ್ರತಿಶತ ಮಾತ್ರ ಉತ್ಪಾದನೆಯಾಗುತ್ತಿದೆ. ಸರಕಾರ ಮನಸ್ಸು ಮಾಡಿ, ರೈತರಿಗೆ ಭರವಸೆ ನೀಡಿದರೆ ಇದರ ಅಂತರವನ್ನ ತಗ್ಗಿಸುವುದು ಕಷ್ಟದ ಕೆಲಸವೇನಲ್ಲ.
ಇತರೆ ಎಣ್ಣೆಗಳ ಬಳಕೆಯನ್ನ ಪ್ರೋತ್ಸಾಹಿಸಬೇಕು: ಅಕ್ಕಿ ಎಣ್ಣೆ ಮತ್ತು ಹತ್ತಿ ಎಣ್ಣೆಯಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಹೃದಯ ಬೇನೆಯಿರುವರಿಗೆ ಇದು ರಾಮಬಾಣ. ಹೀಗಾಗಿ ಸರಕಾರ ಇವುಗಳ ಬಳಕೆಯನ್ನ ಹೆಚ್ಚಾಗಿ ಮಾಡುವಂತೆ ಜನತೆಗೆ ಜಾಹಿರಾತುಗಳ ಮೂಲಕ ಮಾಹಿತಿಯನ್ನ ನೀಡಬೇಕು. ನಮ್ಮ ದೇಶದಲ್ಲಿ ಹತ್ತಿ ಎಣ್ಣೆಯನ್ನ ಬೆಳೆಯುವ ಅತ್ಯುತ್ತಮ ಅವಕಾಶವಿದೆ. ಸರಿಯಾದ ಮಾರ್ಕೆಟಿಂಗ್ ಮತ್ತು ಬೆಲೆ ನಿಗದಿ ಮಾಡುವ ಮೂಲಕ ಪಾಮ್ ಆಯಿಲ್ ಮೇಲಿನ ಅವಲಂಬನೆ ಜೊತೆಗೆ ವಿದೇಶಗಳ ಮೇಲಿನ ಅವಲಂಬನೆಯನ್ನ ತಗ್ಗಿಸುವ ಕೆಲಸವನ್ನ ಮಾಡಬೇಕಿದೆ.
ಕೊನೆಮಾತು: ಭಾರತ 2019 ರಲ್ಲಿ 7300 ಕೋಟಿ ರೂಪಾಯಿ ಬೆಲೆ ಬಾಳುವ ಅಡುಗೆ ಎಣ್ಣೆಯನ್ನ ಆಮದು ಮಾಡಿಕೊಂಡಿದೆ. ನಿಮಗೆ ತಿಳಿದಿರಲಿ ಇದು ಒಟ್ಟು ಕೃಷಿ ಕ್ಷೇತ್ರದ ಆಮದಿನ 40 ಪ್ರತಿಶತ! ಅಂದರೆ ಗಮನಿಸಿ ಹೆಚ್ಚಿದ ಬೆಲೆಯಲ್ಲಿ ಅದು ದುಪಟ್ಟಾಗಿದೆ. ಅಂದರೆ ನಾವು ನೀಡುತ್ತಿರುವ ಹೆಚ್ಚಿನ ಬೆಲೆ ನಮ್ಮ ಸರಕಾರದ ಜೋಬಿಗೆ ಕೂಡ ಸೇರುತ್ತಿಲ್ಲ ಎನ್ನುವುದು ವೇದ್ಯವಾಯ್ತು. ವರ್ಷದಿಂದ ವರ್ಷಕ್ಕೆ ನಮ್ಮ ಬಳಕೆ ಹೆಚ್ಚಾಗುತ್ತಿದೆ,ಆದರೆ ಡೊಮೆಸ್ಟಿಕ್ ಉತ್ಪಾದನೆ ಮಾತ್ರ ಹೆಚ್ಚಳ ಕಂಡಿಲ್ಲ. ಕೇಂದ್ರ ಸರಕಾರ ತಕ್ಷಣ ಮಾಡಬೇಕಾದ ಕೆಲಸದಲ್ಲಿ ಪ್ರಥಮವಾಗಿ ಅಡುಗೆ ಎಣ್ಣೆಯ ಬೆಲೆಯನ್ನ ಸಬ್ಸಿಡಿ ನೀಡುವುದರ ಮೂಲಕ ಕಡಿಮೆ ಮಾಡುವುದು ಮತ್ತು ಮುಂಬರುವ ದಿನಗಳಲ್ಲಿ ಡೊಮೆಸ್ಟಿಕ್ ಉತ್ಪಾದನೆಯನ್ನ ಹೆಚ್ಚಿಸಲು ಬೇಕಾಗುವ ಎಲ್ಲಾ ಮಾರ್ಗಗಳ ಅನ್ವೇಷಣೆ ಮಾಡಬೇಕಿದೆ.
-ರಂಗಸ್ವಾಮಿ ಮೂಕನಹಳ್ಳಿ