ಉಡುಪಿ: ಕುಟುಂಬ ನಿರ್ವಹಣೆಗೆ ಕೂಡಿಟ್ಟ 70,000 ರೂ. ಹಸಿವು ನೀಗಿಸಲು ದಾನ ಮಾಡಿದ ಕೂಲಿ ಕಾರ್ಮಿಕ!

ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ): ಸಹೃದಯಿ ಸಿರಿವಂತರು, ಅನುಕೂಲಸ್ಥರು ತಮ್ಮ ಉದ್ಯಮದ ಲಾಭದ ಒಂದಿಷ್ಟು ಅಂಶವನ್ನು ಸಮಾಜ ಕಾರ್ಯಗಳಿಗೆ ಮೀಸಲಿಡುವುದನ್ನು ತಿಳಿದಿದ್ದೇವೆ. ಆದರೆ ಇಲ್ಲೊಬ್ಬ ಕೂಲಿ ಕಾರ್ಮಿಕರು ತಾನು ತನ್ನ ಕುಟುಂಬ ನಿರ್ವಹಣೆಗೆ ಕೂಡಿಟ್ಟಿದ್ದ 70,000 ಹಣವನ್ನು ಅಸಹಾಯಕರ ಹಸಿವು ನೀಗಿಸಲು ದಾನ ಮಾಡಿದ್ದಾರೆ. 

 ಈ ಮಹತ್ಕಾರ್ಯ ಮಾಡಿರುವವರು ಉಡುಪಿಯ ಕೃಷ್ಣ. ಅಂಬಲಪಾಡಿಯ ನಿವಾಸಿಯಾಗಿರುವ ಇವರದ್ದು ಕೂಲಿ ಕೆಲಸ. ಬೆವರು ಸುರಿಸಿ ಸಂಪಾದಿಸಿದ ಸುಮಾರು 70,000 ರೂ. ನ್ನು ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಕ್ಕಿ, ಬೇಳೆ, ಉಪ್ಪು, ಸಕ್ಕರೆ, ಚಹಾ ಹುಡಿ, ಎಲೆ, ಅಡಿಕೆ ಮತ್ತಿತರ ಅಗತ್ಯ ವಸ್ತುಗಳನ್ನು ಸುತ್ತಮುತ್ತಲಿನ 70 ಕುಟುಂಬಗಳಿಗೆ ವಿವರಿಸಿದ್ದಾರೆ.

ಕೃಷ್ಣ ಅವರು ಆರ್ಥಿಕವಾಗಿ ಶ್ರೀಮಂತರಲ್ಲ. ಆದರೆ ಹೆಚ್ಚಿನ ಶ್ರೀಮಂತರಿಗೆ ಇಲ್ಲದ ಹೃದಯ ಶ್ರೀಮಂತಿಕೆ ಇವರಿಗಿದೆ. ತಮ್ಮ ಸೇವೆಯ ಬಗ್ಗೆ ಮಾಧ್ಯಮದ ಜೊತೆ  ಮಾತನಾಡಿದ ಕೃಷ್ಣ ಅವರು, ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ತಮ್ಮ ಪೋಷಕರು ಅನುಭವಿಸಿದ ಕಷ್ಟ ಅರಿತಿರುವುದರಿಂದ ಜನರ ಕಷ್ಟ ಏನು ಎಂಬುದು ಗೊತ್ತಿದೆ. ಆದ್ದರಿಂದ ತಾನು ವರ್ಷ ಪೂರ್ತಿ ಕೂಲಿ ಕೆಲಸ ಮಾಡಿ ಗಳಿಸಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಡಬ್ಬಿಯಲ್ಲಿ ಕೂಡಿಟ್ಟು ಉತ್ತಮ ಕೆಲಸಕ್ಕೆ ಬಳಸುತ್ತೇನೆ ಎನ್ನುತ್ತಾರೆ.

ಇನ್ನು ಸಮಾಜ ಸೇವಕ  ವಿಶು ಶೆಟ್ಟಿ ಅಂಬಲಪಾಡಿ ಅವರ ನಿರಂತರ ಜನಸೇವೆಯಿಂದ ಸ್ಪೂರ್ತಿ ಪಡೆದ ಕೃಷ್ಣ ಅವರು ತಾವೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಸಮಾಜ ಸೇವಕ ವಿಶ್ವ ಶೆಟ್ಟಿ ಅಂಬಲಪಾಡಿ ಅವರು, ಕಿಟ್ಟ ನನ್ನ ಗೆಳೆಯ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ಸ್ಪಂದಿಸುವ ವ್ಯಕ್ತಿ. ಕೂಲಿ ಕೆಲಸ ಮಾಡಿ ತಾಯಿಯ ಜೊತೆ ಬದುಕುತ್ತಿರು ವವರು ಮೃದುಹೃದಯಿ. ಎಲ್ಲರೂ ಕೃಷ್ಣನಂತೆ ಆಲೋಚನೆ ಮಾಡಿದರೆ ಪಕ್ಕದ ಮನೆಯವರು ಹಸಿವಿನಿಂದ ಮಲಗುವುದನ್ನು ತಪ್ಪಿಸಬಹುದು. ಲಾಕ್ಡೌನ್ ಸಂದರ್ಭ ಇವರ ಕಾರ್ಯ ಎಲ್ಲರಿಗೂ ಮಾದರಿ ಎನ್ನುತ್ತಾರೆ. ಕೋವಿಡ್ ನಿಂದ ಅರ್ಥ ವ್ಯವಸ್ಥೆಯೇ ಬುಡಮೇಲಾಗಿರುವ ಈ ಸಂದರ್ಭದಲ್ಲಿ. ಕೂಲಿ ಕೆಲಸ ಮಾಡಿ ಇತರರ ಕಷ್ಟಕ್ಕೆ ನೆರವಾಗುತ್ತಿರುವ ಇವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!