ಕೊರೋನಾ ಸೋಂಕಿಗೆ ಈಗಾಗಲೇ ಒಳಗಾಗಿರುವವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ- ಆರೋಗ್ಯ ತಜ್ಞರು
ಹೊಸದಿಲ್ಲಿ ಜೂ.11: ಕೊರೋನಾ ಸೋಂಕಿಗೆ ಈಗಾಗಲೇ ಒಳಗಾಗಿರುವ ಜನರಿಗೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಜೂ 6 ರಂದು ಏಮ್ಸ್ ನ ವೈದ್ಯರು ಹಾಗೂ ಕೋವಿಡ್ -19 ರ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ತಜ್ಞರ ಸಮೂಹ ಸಲ್ಲಿಸಿದ ವರದಿಯಲ್ಲಿ ಸಲಹೆ ನೀಡಿದ್ದು, ಸಾಮೂಹಿಕ, ವಿವೇಚನೆಯಿಲ್ಲದ ಹಾಗೂ ಅಪೂರ್ಣವಾದ ವ್ಯಾಕ್ಸಿನೇಷನ್ ರೂಪಾಂತರಿತ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎಂದು ಹೇಳಿದೆ.
ತಮ್ಮ ಇತ್ತೀಚಿನ ವರದಿಯಲ್ಲಿ, ಭಾರತೀಯ ಸಾರ್ವಜನಿಕ ಆರೋಗ್ಯ ಸಂಘ (ಐಪಿಎಚ್ಎ), ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಮೆಡಿಸಿನ್ (ಐಎಪಿಎಸ್ಎಂ) ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿ ಯಾಲಜಿಸ್ಟ್ಸ್ (ಐಎಇ) ತಜ್ಞರು, ಮಕ್ಕಳನ್ನು ಒಳಗೊಂಡಂತೆ ವ್ಯಾಪಕ ಚುಚ್ಚುಮದ್ದಿನ ಬದಲು ದುರ್ಬಲ ಹಾಗೂ ಅಪಾಯದಲ್ಲಿ ರುವವರಿಗೆ ಲಸಿಕೆ ಹಾಕುವುದು ಸದ್ಯದ ಗುರಿಯಾಗಿರಬೇಕು ಎಂದು ತಿಳಿಸಿದೆ.