ಕಪ್ಪು ಶಿಲೀಂದ್ರ ಸೋಂಕು ಬಗ್ಗೆ ಖ್ಯಾತ ನೇತ್ರ ತಜ್ಞ ಡಾ.ಕೃಷ್ಣಪ್ರಸಾದ್ ಮಾಹಿತಿ

ನನ್ನ ಕಣ್ಣಿನ ಆಸ್ಪತ್ರೆಗೆ ಇತ್ತೀಚೆಗೆ ಕಣ್ಣಿನ ಚಿಕಿತ್ಸೆಗೆ ಬಂದಂತಹ ಹೆಚ್ಚಿನ ರೋಗಿಗಳು ತುಂಬಾ ಆತಂಕಕ್ಕೆ ಒಳಗಾಗಿರುವುದು ಕಂಡು ಬಂದಿತು. ಹಲವರು ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದಲ್ಲಿ ಬರುತ್ತಿರುವಂತಹ ಕಪ್ಪು ಶಿಲೀಂದ್ರ ಸೋಂಕು ಅಥವಾ ಬ್ಲಾಕ್ ಫಂಗಸ್ ಇನ್ಫೆಕ್ಷನ್ ಖಾಯಿಲೆಯ ಬಗ್ಗೆ ವಿಚಾರಿಸುತ್ತಿದ್ದರು.

ಮ್ಯೂಕರ್ಮೈಕೋಸಿಸ್(Mucormycosis)ಎಂದು ಕರೆಸಿಕೊಳ್ಳುವ ಈ ಶಿಲೀಂದ್ರ ಸೋಂಕು ಕೋವಿಡ್ ರೋಗದಿಂದ ಗುಣಮುಖರಾದ ಕೆಲವು ಜನರಲ್ಲಿ, ಅದರಲ್ಲೂ ಮಧುಮೇಹ ಇರುವವರಲ್ಲಿ ಮತ್ತು ಇಮ್ಮ್ಯೂನಿಟಿ (ರೋಗ ನಿರೋಧಕತೆ) ಕಡಿಮೆ ಇರುವ ರೋಗಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಸೋಂಕು ಕಣ್ಣು ಮತ್ತು ಮೂಗಿನಲ್ಲಿ ಕಂಡು ಬಂದು ಮುಂದಕ್ಕೆ ಮೆದುಳಿಗೂ ಹರಡಬಹುದು. ಜನರ ಕಣ್ಣು ಕಪ್ಪು ಬಣ್ಣಕ್ಕೆ ತಿರುಗಿ ನಮ್ಮಲ್ಲಿ ಚಿಕಿತ್ಸೆಗೆ ಬಂದಾಗ ಆ ಕಣ್ಣನ್ನು ತೆಗೆಯಬೇಕಾದ ಪರಿಸ್ಥಿತಿ ಬರುತ್ತದೆ. ಕಣ್ಣಿನ ಚಿಕಿತ್ಸೆಯಲ್ಲಿ ಅತೀ ದುರದೃಷ್ಟಕರ ಚಿಕಿತ್ಸೆ ಈ ಫಂಗಸ್ ಇನ್‌ಫ಼ೆಕ್ಷನ್ ತೆಗೆಯುವ ಚಿಕಿತ್ಸೆಯಾಗಿದೆ.

ಹೇಗೆ ತಡೆಗಟ್ಟಬಹುದು?
90 ಶೇಖಡಾ ಕೋವಿಡ್ ರೋಗಿಗಳಿಗೆ ಅವರ ಕೊರೋನಾ ಚಿಕಿತ್ಸೆಯಲ್ಲಿ ಸ್ಟೀರಾಡ್ ಪ್ರಯೋಗಿಸುತ್ತಾರೆ ಮತ್ತು ರೋಗಿಯು ಡಿಸ್ಚಾರ್ಜ್ ಆದಾಗ ಬಹಳ ಸಂತೋಷದಿಂದ ಮನೆಗೆ ಬಂದಿರುತ್ತಾರೆ. ಈ ಸಂಧರ್ಭದಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ನೀಡಬೇಕಾದ ಅಗತ್ಯದ ಸಲಹೆ ಏನೆಂದರೆ * ಮನೆಗೆ ಬಂದ ನಂತರ ಆದಷ್ಟು ಪರಿಸರದಲ್ಲಿರುವ ಗಿಡ, ಎಲೆಗಳ ಸಂಪರ್ಕಕ್ಕೆ ಬರದಂತೆ ಜಾಗ್ರತೆ ವಹಿಸುವುದು, ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ ಅಥವಾ ಪಕ್ಷಿಗಳ ಸಂಪರ್ಕದಿಂದ ದೂರ ಇರುವುದು.

ಮನೆಯಲ್ಲಿ ಉಪಯೋಗಿಸುವ ಆಕ್ಸಿಜೆನ್ ಕಾನ್ಸೆನ್ಟ್ರೇಟರ್‌ಗೆ ಸ್ಟೆರೈಲ್ ಆದ ನೀರನ್ನು ಬಳಸುವುದು ಮತ್ತು ಸ್ವಛ್ಛತೆಯನ್ನು ಮಾಡುವುದು. ಒಂದು ಅತೀ ಉತ್ತಮ ಚಿಕಿತ್ಸೆಯಾದ ನೀರಾವಿ ತೆಗೆದುಕೊಳ್ಳುವಾಗ (steam inhalation) ಬಿಸಿನೀರಿಗೆ ಒಂದು ತೊಟ್ಟು ನೀಲಗಿರಿ ಎಣ್ಣೆ(Eucalyptus Oil)) ಹಾಕಿ ಆವಿ ಸೇವಿಸಬೇಕು. ಬಾಯಿ, ಗಂಟಲು ಮುಕ್ಕಳಿಸುವಾಗ(Gargling) ಗಂಟಲನ್ನು Chlorhexidine ನಿ೦ದ ಗಾರ್ಗಲ್ ಮಾಡಬೇಕು. ಅದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಸೋಂಕನ್ನು ತಡೆಗಟ್ಟುತ್ತದೆ.

ಕೋವಿಡ್‌ನಿಂದ ಗುಣ ಹೊಂದಿದಂತಹ ರೋಗಿಗಳು ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಂಡು ತಮ್ಮ ದೇಹದ ಇಮ್ಯೂನಿಟಿ ಹೆಚ್ಚಿಸಲು ಪ್ರಯತ್ನಿಸಬೇಕು, ಮತ್ತು ಇದಕ್ಕಾಗಿ ವೈದ್ಯರು ಹೇಳಿರುವ ಔಷಧಿಗಳನ್ನು ಕ್ರಮಬದ್ಧವಾಗಿ ತೆಗೆದು ಕೊಳ್ಳಬೇಕು, ಅವರ ಸೂಚನೆಗಳನ್ನು ಪಾಲಿಸಬೇಕು. ಆದುದರಿಂದ ವೈದ್ಯಕೀಯ ಚಿಕಿತ್ಸೆಯಲ್ಲಿ ಮೊದಲೇ ಇದ್ದಂತಹ ಈ ಕಪ್ಪು ಶಿಲೀಂದ್ರ ಸೋಂಕಿಗೆ ಭಯಪಡದೇ, ನಮ್ಮ ದೇಹಕ್ಕೆ ಅದರಿಂದಾಗಿ ತೊಂದರೆಯಾಗದೇ ಇರುವಂತಹ ರೀತಿಯಲ್ಲಿ ನಮ್ಮ ದೇಹದ ರೋಗನಿರೋಧಕತೆಗೆ ಬೇಕಾಗುವ ಎಲ್ಲಾ ಕ್ರಮಗಳೊಂದಿಗೆ ಜೀವಿಸಬೇಕಾಗುತ್ತದೆ.


ಡಾ. ಕೃಷ್ಣಪ್ರಸಾದ್ ಕೂಡ್ಲು, ಖ್ಯಾತ ನೇತ್ರ ತಜ್ಞರು
ವೈದ್ಯಕೀಯ ನಿರ್ದೇಶಕರು,
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಸಮೂಹ ಆಸ್ಪತ್ರೆಗಳು
.

Leave a Reply

Your email address will not be published. Required fields are marked *

error: Content is protected !!