ಕೊರೋನಾದಿಂದ ಗುಣಮುಖರಾಗಿದ್ದ ಕಾಂಗ್ರೆಸ್ ಸಂಸದ ರಾಜೀವ್ ಸತಾವ್ ನಿಧನ

ಪುಣೆ: ಕಾಂಗ್ರೆಸ್ ಸಂಸದ ರಾಜೀವ್ ಸತಾವ್ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಅಸುನೀಗಿದ್ದಾರೆ. ಕೆಲ ದಿನಗಳ ಹಿಂದೆ ಅವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು.

46 ವರ್ಷದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಸತಾವ್ ಅವರಿಗೆ ಕಳೆದ ಏಪ್ರಿಲ್ 22ರಂದು ಕೊರೋನಾ ಸೋಂಕು ಬಂದು ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ವೆಂಟಿಲೇಟರ್ ನೆರವಿನಲ್ಲಿದ್ದರು. ಆಸ್ಪತ್ರೆಗೆ ದಾಖಲಾಗಿ ಕೆಲ ದಿನಗಳು ಕಳೆದ ನಂತರ ಹೊಸ ವೈರಾಣು ಸೋಂಕು ಅವರ ದೇಹದಲ್ಲಿ ಕಾಣಿಸಿಕೊಂಡು ಆರೋಗ್ಯ ತೀವ್ರ ಹದಗೆಟ್ಟು ಹೋಗಿತ್ತು.

ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿಗೆ ನಿಕಟವರ್ತಿಯಾಗಿದ್ದ ರಾಜೀವ್ ಸತಾವ್, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿದ್ದರು.

ಪ್ರಧಾನಿ ಕಂಬನಿ: ಕಾಂಗ್ರೆಸ್ ಸಂಸದ ರಾಜೀವ್ ಸತಾವ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಸಾಕಷ್ಟು ಸಮರ್ಥರಾಗಿದ್ದ ಉದಯೋನ್ಮುಖ ನಾಯಕ ರಾಜೀವ್ ಸತಾವ್ ನಿಧನ ಅತ್ಯಂತ ದುಃಖದ ವಿಷಯ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಕಂಬನಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಂಸದ ರಾಜೀವ್ ಸತಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನನ್ನ ಸ್ನೇಹಿತ ರಾಜೀವ್ ನಿಧನ ತೀವ್ರ ದುಃಖದ ವಿಷಯ, ರಾಜಕೀಯವಾಗಿ ಸಾಕಷ್ಟು ಸಮರ್ಥರಾಗಿದ್ದ ರಾಜೀವ್ ಸತಾವ್ ಕಾಂಗ್ರೆಸ್ ನ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದವರು, ಅವರ ನಿಧನ ನಮಗೆ ಅತ್ಯಂತ ದೊಡ್ಡ ನಷ್ಟ,ಅವರ ಕುಟುಂಬದವರಿಗೆ ಸಂತಾಪಗಳು, ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!