ಗುಜರಾತ್ ಕರಾವಳಿಯತ್ತ ಚಂಡಮಾರುತ: 56 ರೈಲು ರದ್ದು

ಅಹ್ಮದಾಬಾದ್: ಟೌಕ್ಟೇ ಚಂಡಮಾರುತ ಗುಜರಾತ್ ಕರಾವಳಿಯತ್ತ ನುಗ್ಗಿದ್ದು, ಮುಂಜಾಗ್ರತ್ರಾ ಕ್ರಮವಾಗಿ ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಶನಿವಾರ ಮೇ 21 ರವರೆಗೆ 56 ರೈಲುಗಳನ್ನು ರದ್ದುಗೊಳಿಸಿದೆ.

ಈ ಪೈಕಿ ಕೆಲವು ರೈಲುಗಳನ್ನು `ಅಲ್ಪಾವಧಿಗೆ ಸ್ಥಗಿತಗೊಳಿಸಲಾಗಿದ್ದು, ರದ್ದಾದ ಎಲ್ಲಾ ರೈಲುಗಳು ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವಾಗಿವೆ. ಅಲ್ಲಿಂದಲೇ ಪ್ರಯಾಣ ಆರಂಭಿಸಿ, ಅಲ್ಲೇ ಪ್ರಯಾಣ ಅಂತ್ಯಗೊಳಿಸುವ ರೈಲುಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತೆಯೇ ಮೂರು ರೈಲುಗಳನ್ನು ಮೇ 15  ರಂದು, ಮೇ 16 ರಂದು 11, ಮೇ 17 ರಂದು 22, ಮೇ 18 ರಂದು 13, ಮೇ 19 ರಂದು ಐದು ಮತ್ತು ಮೇ 20 ಮತ್ತು 21 ರಂದು ತಲಾ ಒಂದು ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೈಲುಗಳಲ್ಲಿ ಹೆಚ್ಚಿನವು ಭುಜ್, ಪೋರ್ಬಂದರ್, ಗಾಂಧಿಧಾಮ್, ಭಾವ್ ನಗರ, ರಾಜ್‌ಕೋಟ್, ಸುರೇಂದ್ರನಗರ, ವೆರಾವಲ್ ಮತ್ತು ಓಖಾ ನಗರಗಳಿಗೆ ಪ್ರಯಾಣಿಸುತ್ತವೆ. ಚಂಡಮಾರುತದ ದೃಷ್ಟಿಯಿಂದ ರೈಲು ಮತ್ತು ರಸ್ತೆ ಸೇವೆಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಗೃಹ ಸಚಿವಾಲಯ ತನ್ನ ಸಲಹೆಯಲ್ಲಿ  ಹೇಳಿದೆ.

ಚಂಡಮಾರುತವನ್ನು ಎದುರಿಸಲು ರಾಜ್ಯದ ಸಿದ್ಧತೆಯನ್ನು ಪರಿಶೀಲಿಸಲು ಕರೆಯಲಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು, ‘ವಿದ್ಯುತ್ ಕಡಿತ ಅಥವಾ ಇತರ ಪ್ರತಿಕೂಲ ಘಟನೆಗಳ ಸಂದರ್ಭದಲ್ಲಿ ಗಂಭೀರ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ  ನೋಡಿಕೊಳ್ಳಲು ಕರಾವಳಿ ಪ್ರದೇಶದ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಅಗತ್ಯವಿದ್ದಲ್ಲಿ ಆಮ್ಲಜನಕ ಅಥವಾ ವೆಂಟಿಲೇಟರ್‌ನಲ್ಲಿರುವ ಎಲ್ಲ ರೋಗಿಗಳನ್ನು ಹತ್ತಿರದ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು ಎಂದು ಅವರು ಸೂಚಿಸಿದ್ದಾರೆ. ಸುಧಾರಿತ ಜೀವ ಬೆಂಬಲ  ವ್ಯವಸ್ಥೆ ಮತ್ತು ಐಸಿಯು ಹೊಂದಿರುವ ಆಂಬ್ಯುಲೆನ್ಸ್‌ಗಳನ್ನು ಗುಜರಾತ್‌ನ ಇತರ ಭಾಗಗಳಿಂದ ಜಾಮ್‌ನಗರ, ರಾಜ್‌ಕೋಟ್, ಕಚ್ ಮತ್ತು ಜುನಾಗಡ್ ‌ಗೆ ಕಳುಹಿಸಬೇಕು ಎಂದು ಅವರು ಹೇಳಿದರು.

ಟೌಕ್ಟೇ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಇದು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಮೇ 18 ರ ಬೆಳಿಗ್ಗೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಮೇ 18 ರ ಮಧ್ಯಾಹ್ನ ಅಥವಾ ಸಂಜೆ ಪೊರ್ಬಂದರ್ ಮತ್ತು ನಲಿಯಾ ನಡುವೆ ಗುಜರಾತ್ ಕರಾವಳಿಯನ್ನು  ದಾಟಲಿದೆ” ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!