ಆಡಳಿತಾಧಿಕಾರಿಗಳಿಂದ ಮಾನಸಿಕ ಕಿರುಕುಳ- ದುರ್ವರ್ತನೆ: 14 ವೈದ್ಯರ ರಾಜೀನಾಮೆ!

ಉನ್ನಾವೊ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ವೈದ್ಯರು ಆಡಳಿತ ಅಧಿಕಾರಿಗಳ ವಿರುದ್ಧ ದುರ್ವರ್ತನೆ ಮತ್ತು ಮಾನಸಿಕ ಕಿರುಕುಳ ಆರೋಪ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

ಆದಾಗ್ಯೂ, ರಾಜೀನಾಮೆ ಕುರಿತು ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಯುವವರೆಗೂ ತಮ್ಮ ಕೋವಿಡ್ ಸಂಬಂಧಿತ ಕೆಲಸಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಇಲ್ಲಿನ ಸಿಎಚ್‌ಸಿ ಮತ್ತು ಪಿಎಚ್‌ಸಿಗಳ ಉಸ್ತುವಾರಿ ಹೊಂದಿರುವ ಹದಿನಾಲ್ಕು ವೈದ್ಯರು ಬುಧವಾರ ಸಂಜೆ ಸಿಎಮ್‌ಒ ಕಚೇರಿಯಲ್ಲಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.

ಅವರು ತಮ್ಮ ರಾಜೀನಾಮೆ ಪತ್ರಗಳ ಪ್ರತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹಾನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳಿಗೂ ರವಾನಿಸಿದ್ದಾರೆ.

“ನಾವು ಪ್ರಾಂತೀಯ ವೈದ್ಯಕೀಯ ಸೇವೆಗಳ(ಪಿಎಂಎಸ್) ಸಂಘದ ಬ್ಯಾನರ್ ಅಡಿಯಲ್ಲಿ ಹೋರಾಡುವುದಿಲ್ಲ. ಇದು ನಮ್ಮ ಹೋರಾಟ. ಕಳೆದ ಒಂದು ವರ್ಷದಿಂದ ನಾವು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ಸಂಪನ್ಮೂಲಗಳೊಂದಿಗೆ ಕೆಲಸ ಮಾಡುತ್ತಿದ್ದರೂ ಸಹ ಡಿಎಂ ಮತ್ತು ಸಿಎಮ್ಒ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಸಹಕರಿಸುವ ಬದಲು, ಆಡಳಿತ ಅಧಿಕಾರಿಗಳು ನಮಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ” ಎಂದು ಡಾ ಸಂಜೀವ್ ಅವರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!