ಈದುಲ್ ಫ್ರಿತ್ ಹಬ್ಬವನ್ನು ಸರಳವಾಗಿ ಆಚರಿಸಿ, ಬಡವರಿಗೆ ಸಹಾಯ ಮಾಡಿ: ಮುಸ್ಲಿಮ್ ಒಕ್ಕೂಟದಿಂದ ಈದ್ ಸಂದೇಶ
ಉಡುಪಿ, ಮೇ 11: ಕೊರೋನಾ ಮಹಾಮಾರಿಯ ಎರಡನೇ ಅಲೆಯು ನಮ್ಮನ್ನು ಇನ್ನಿಲ್ಲದಂತೆ ಬೆಚ್ಚಿ ಬೀಳಿಸಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಮ್ ಬಾಂಧವರು ಈದುಲ್ ಫ್ರಿತ್ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಅಲ್ಲದೆ ತಮ್ಮ ನೆರೆಹೊರೆಯ ಅರ್ಹ ಬಡವರಿಗೆ ಜಾತಿ ಮತ ನೋಡದೆ ಸಹಾಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಈ ಜಗತ್ತು ಕೊರೋನಾ ಎಂಬ ಮಹಾಮಾರಿಯ ಕಬಂಧಬಾಹುವಿನಲ್ಲಿ ನಲುಗಿದ್ದು, ನಮ್ಮ ದೇಶವೂ ಅದಕ್ಕೆ ಹೊರತಾಗಿಲ್ಲ. ಕಳೆದ ವರ್ಷದ ಈ ಅವಧಿಯಲ್ಲಿ ಈ ಕಾಯಿಲೆಯಿಂದ ಅಂತಹ ಸಾವು ನೋವಿನ ಅನುಭವವಾಗದಿದ್ದರೂ ಅದರ ದುಷ್ಪರಿಣಾಮವು ಹಲವು ಆಯಾಮಗಳಲ್ಲಿ ನಮ್ಮನ್ನು ಕಾಡಿತ್ತು. ನಮ್ಮ ಆರೋಗ್ಯ ಸೇನಾನಿಗಳಿಂದಾದಿಯಾಗಿ ಅದೆಷ್ಟೋ ದೇಶ ಬಾಂಧವರು ನಮ್ಮನ್ನು ಅಗಲಿರುವುದು ಮತ್ತು ಈ ಕಾಲಾವಧಿಯ ಪರಿಣಾಮಗಳು ನಮ್ಮೆಲ್ಲರನ್ನು ದುಃಖಕ್ಕೀಡು ಮಾಡಿದೆ. ಬಂಧು ಬಾಂಧವರನ್ನು ಕಳೆದುಕೊಂಡ ನೋವು ಮತ್ತು ಅನುಭವಿಸಿದ ಯಾತನೆಯು ಮನ ಕಲುಕಿಸಿದೆ ಎಂದು ಅವರು ಹೇಳಿದ್ದಾರೆ.
ಸರಕಾರ ಮತ್ತು ಆಡಳಿತ ಯಂತ್ರ ಕರೋನಾ ಮಹಾಮಾರಿಯ ಸರಪಣಿಯನ್ನು ಮುರಿಯುವ ಉದ್ದೇಶದಿಂದ ಹೇರಿದ ಕರ್ಫ್ಯೂ ಮತ್ತು ಲಾಕ್ಡೌನ್ಗಳು ಅವೈಜ್ಞಾನಿಕವಾಗಿರುವ ಬಗ್ಗೆ ಜನ ಮಾನಸದಲ್ಲಿ ಅತೃಪ್ತಿ ಇದ್ದರೂ ಸಮುದಾಯ ಈ ಸಾಂಕ್ರಾಮಿಕ ರೋಗಕ್ಕೆ ತಡೆ ನೀಡಲು ಆಡಳಿತ ದೊಂದಿಗೆ ಸಹಕರಿಸುತ್ತಿರುವುದು ಸಂತೋಷದಾಯಕ. ಇದು ಸಮುದಾಯವು ವಿಚಾರಪೂರ್ಣ ಜವಾಬ್ದಾರಿಯುತ ಸೇವಾ ಮನೋಭಾವದ ಮಾನವೀಯ ಸಂಘಟನೆಗಳು ನಮ್ಮ ಸಹೋದರ ಸಹೋದರಿಯರ ನೆರವಿಗಾಗಿ ಹಗಲು ರಾತ್ರಿ ಕೈಯೊಡ್ಡಿರುವುದು ಸರ್ವಶಕ್ತನಾದ ಜಗದೊಡೆಯನ ಕೃಪೆಗೆ ಪಾತ್ರವಾಗಿದೆ.
ಪವಿತ್ರ ರಮದಾನಿನ ಉಪವಾಸ ವೃತಾಚರಣೆಯಲ್ಲೂ ನಮ್ಮ ಸಂಘಟನೆಗಳ ಸದಸ್ಯರು, ಮಹಿಳಾ ಘಟಕಗಳೂ ಸೇರಿ ಕಟಿಬದ್ಧರಾಗಿ ಮೃತದೇಹಗಳ ವಿಲೇ ವಾರಿಯಿಂದಾದಿಯಾಗಿ ಮಾಡಿದ ಮತ್ತು ಮಾಡುತ್ತಿರುವ ಸೇವೆಗಳು ಪ್ರಪಂಚ ದಾದ್ಯಂತ ಪ್ರಶಂಸನೀಯವಾಗಿದೆ. ಪವಿತ್ರ ರಮದಾನ್ ಕಳೆದ ವರ್ಷದಂತೆ ಈ ವರ್ಷವೂ ಕಳೆದಿದ್ದು, ವಿದಾಯ ಹಂತದಲ್ಲಿದೆ. ಒಬ್ಬರನ್ನೊಬ್ಬರು ಹರಸಿ ಹಾರೈಸುವ ಸಂತೋಷವು ಕಮರಿದೆ. ಆದರೆ ದೂರದಿಂದಲೇ ದೂರವಾಣಿ ಸಂದೇಶದ ಮೂಲಕ ನಮ್ಮ ಹಾರೈಕೆಗಳನ್ನು ವಿನಿಮಯ ಮಾಡಿಕೊಂಡು ಸೃಷ್ಠಿಕರ್ತನಿಗೆ ಕೃತಾರ್ಥರಾಗೋಣ ಮತ್ತು ನಮ್ಮನ್ನಗಲಿದ ದೇಶಬಾಂಧವರ ಸದ್ಗತಿಗಾಗಿ ಹಾಗೂ ಈ ಸಂಕಟದಲ್ಲಿ ನರಳು ತ್ತಿರುವ ಜೀವಗಳ ಚೇತರಿಕೆಗಾಗಿ ಪ್ರಾರ್ಥಿಸೋಣ.
ಇದೇ ಸಂದರ್ಭದಲ್ಲಿ ದೇಶ ಬಾಂಧವರ ಸೇವೆಗೈಯುತ್ತಿರುವ ಎಲ್ಲ ವಾರಿಯರ್ಸ್ ಮತ್ತು ಸೇವಾ ಸಂಘಟನೆ ಗಳ ಸದಸ್ಯರುಗಳನ್ನು ಹೃದಯಾಂತರಾಳದಿಂದ ಹರಸೋಣ.ಅಂತಿಮವಾಗಿ ಈ ಮಹಾಮಾರಿಗೆ ಸಂಬಂಧಪಟ್ಟಂತೆ ಹಾಗೂ ಸೇವಾ ಕಾರ್ಯಗಳಿಗೆ ಸಂಬಂಧಪಟ್ಟಂತೆ ಮತ್ತು ಆಡಳಿತಾತ್ಮಕ ನಿಲುವುಗಳಿಗೆ ಸಂಬಂಧ ಪಟ್ಟಂತೆ ಹರಿದಾಡುವ ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಪರಾಮರ್ಶಿಸದೇ ಅವಿವೇಚನೆಯಿಂದ ಮುಂದುವರಿಸಬೇಡಿ. ಬದಲಾಗಿ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಒಂದೇ ತಾಯಿಯ ಮಕ್ಕಳಾದ ದೇಶ ಬಾಂಧವರು ನಾವೆಲ್ಲರು ಒಂದು ಮತ್ತು ನಮ್ಮ ಜೀವನ-ಸಾಧನೆ ಎಲ್ಲವೂ ಅಂತಿಮವಾಗಿ ಸೃಷ್ಟಿಕರ್ತನ ಸಂತೃಪ್ತಿಗಾಗಿ, ಪರಲೋಕ ವಿಜಯಕ್ಕಾಗಿ ಎಂಬುದನ್ನು ಮನಗಂಡು ಕಾರ್ಯತತ್ಪರಾಗೋಣ ಎಂಬ ಹಂಬಲ ನಮ್ಮದಾಗಿದೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.