ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ- ಡಾ|ಜೆರಾಲ್ಡ್ ಲೋಬೊ

ಉಡುಪಿ ಮೇ 9: ಕಳೆದ ಒಂದು ವರ್ಷದಿಂದ ನಮ್ಮನ್ನು ಕಾಡುತ್ತಿರುವ ಕೋವಿಡ್ -19 ಸೋಂಕಿನ ಮಾರಕ ಎರಡನೇ ಅಲೆಯು ಇದೀಗ ನಮ್ಮನ್ನೆಲ್ಲ ಅತೀವವಾಗಿ ಕಂಗೆಡಿಸಿದೆ. ನಮ್ಮ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಅಮಾಯಕರು ಈ ಸೋಂಕಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಲಕ್ಷಾಂತರ ಜನರು ಈ ಸೋಂಕಿನಿಂದ ಚಡಪಡಿಸುತ್ತಿದ್ದಾರೆ. ಈ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ. ದಿಟ್ಟತನದಿಂದ ನಮ್ಮ ಜನರನ್ನು ಹಾಗೂ ನಮ್ಮನ್ನು ಈ ಸೋಂಕಿನ ದವಡೆಯಿಂದ ರಕ್ಷಿಸಬೇಕಾಗಿದೆ.

1. ವಿಜ್ಞಾನಿಗಳು, ತಜ್ಞರು, ವೈದ್ಯರು ಹಾಗೂ ಇತರ ವಿಶೇಷ ಪರಿಣತಿಯುಳ್ಳವರು ಕೋವಿಡ್-19 ಸೋಂಕಿನ ಬಗ್ಗೆ ಆಳವಾಗಿ ಅಧ್ಯಯನವನ್ನು ನಡೆಸಿ ರಾಷ್ಟ್ರದ, ರಾಜ್ಯದ ಹಾಗೂ ಸ್ಥಳೀಯ ಆಡಳಿತಕ್ಕೆ ಈ ಸೋಂಕನ್ನು ಎದುರಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿರುತ್ತಾರೆ. ನಾವೆಲ್ಲರೂ ಯಾವುದೇ ಊಹಾಪೆÇೀಹಗಳು, ಸುಳ್ಳು ಸುದ್ಧಿ ಅಥವ ತಪ್ಪುತಿಳುವಳಿಕೆಗಳಿಗೆ ಬಲಿಯಾಗದೆ ನಮಗಿತ್ತ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ.

2. ಕೋವಿಡ್-19 ಸೋಂಕಿನ ವಿರುದ್ಧ ಅತ್ಯಲ್ಪ ಕಾಲದಲ್ಲಿ ಲಸಿಕೆಗಳನ್ನು ಕಂಡುಹಿಡಿದ ವಿಜ್ಞಾನಿಗಳು ಹಾಗು ತಜ್ಞರು ಅಭಿನಂದನಾರ್ಹರು. ಕೋವಿಡ್-19 ಸೋಂಕನ್ನು ಸೋಲಿಸಲು ಎಲ್ಲರೂ ತಪ್ಪದೆ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಅಥವ ಸಾಮಾಜಿಕ ತಪ್ಪು ತಿಳುವಳಿಕೆ ಹಾಗೂ ಮೂಢನಂಬಿಕೆಗಳಿಗೆ ಬಲಿಯಾಗದೆ ಎಲ್ಲರೂ ಆದಷ್ಟು ಬೇಗ ಈ ಲಸಿಕೆಯನ್ನು ಹಾಕಿಸಿಕೊಳ್ಳೋಣ.

3. ನಮ್ಮ ಉಡುಪಿ ಜಿಲ್ಲೆಯಲ್ಲಿ ಮೇ 10 ರಿಂದ ಕಟ್ಟುನಿಟ್ಟಿನ ಸಂಪೂರ್ಣ ಲಾಕ್‍ಡೌನ್ ಮಾಡುವುದಾಗಿ ಜಿಲ್ಲಾ ಆಡಳಿತವು ತಿಳಿಸಿದೆ. ಕೋವಿಡ್-19 ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದೇ ಇರಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದರೆ ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸುರಕ್ಷತೆಯಲ್ಲೇ ಉಳಿಯುವುದು. ಇದು ಬಹಳ ಕಷ್ಟದ ಕೆಲಸ. ಆದರೂ, ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ನಮ್ಮಿಂದ ಇತರ ಅಮಾಯಕರು ಸೋಂಕಿಗೆ ಬಲಿಯಾಗುವುದನ್ನು ತಪ್ಪಿಸಲು ಎಲ್ಲರೂ ಗರಿಷ್ಠ ಪ್ರಯತ್ನಿಸಿ ಲಾಕ್‍ಡೌನ್‍ನ್ನು ಪಾಲಿಸೋಣ.

4. ಕಳೆದ ವರ್ಷದ ಕೋವಿಡ್-19 ಸಮಯದಲ್ಲಿ ಸೋಂಕಿಗೆ ಸಿಲುಕಿದವರು, ಕಾರ್ಮಿಕರು, ನಿರಾಶ್ರಿತರು, ವೃದ್ಧರು ಇನ್ನಿತರರಿಗೆ ಸಹಾಯ ಹಸ್ತವನ್ನು ನೀಡಿದಂತೆ, ಈಗಲೂ ಸಾಧ್ಯವಾದ ಎಲ್ಲಾ ಸಹಾಯವನ್ನು ನೀಡಲು ಉಡುಪಿ ಧರ್ಮಪ್ರಾಂತ ಹಾಗೂ ಅದರ ಎಲ್ಲಾ ಚರ್ಚುಗಳು ಸಿದ್ಧವಾಗಿವೆ. ಜಿಲ್ಲೆಯ ಎಲ್ಲಾ 52 ಧರ್ಮಕೇಂದ್ರಗಳೂ ಕಥೊಲಿಕ್ ಸಭಾ, ಯುವ ಸಂಚಲನ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಬೇಕಾದ ನೆರವನ್ನು ನೀಡುತ್ತಿವೆ. ಈ ವಿಷಮ ಕಾಲದಲ್ಲಿ ಕೋವಿಡ್ ಸೋಂಕಿನಿಂದ ಮುಕ್ತಿ ಹೊಂದಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡೋಣ. ಸೃಷ್ಟಿಸಿದ ಭಗವಂತ ರಕ್ಷಕನೂ ಹೌದು, ಅವನಲ್ಲಿ ಮೊರೆಯಿಡೋಣ. ಪರಸ್ಪರರಿಗಾಗಿ ಪ್ರಾರ್ಥಿಸೋಣ. ಕರುಣಾಮಯಿ ದೇವರು ನಮ್ಮನ್ನೆಲ್ಲ ರಕ್ಷಿಸಿ ಕಾಪಾಡಲಿ. 
 ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊ ಉಡುಪಿಯ ಧರ್ಮಾಧ್ಯಕ್ಷರು

Leave a Reply

Your email address will not be published. Required fields are marked *

error: Content is protected !!