ಅಮ್ಮ ನಿನ್ನ ತೋಳಿನಲ್ಲಿ….
ತನಗಾಗಿ ಏನನ್ನೂ ಬಯಸದವಳು ಅವಳಿಗಾಗಿ ಏನನ್ನೂ ಕೊಡಿಡದವಳು ತನಗಿಲ್ಲವೆಂದು ಕೊರಗದವಳು ಸೋತಾಗ ಸದಾ ಜೊತೆಗೆ ನಿಂತವಳು ಮಕ್ಕಳ ನಗುವಲ್ಲೇ ತನ್ನ ಖುಷಿ ಕಂಡವಳು ಮಕ್ಕಳಿಗಾಗಿಯೇ ಇಡೀ ಜೀವನ ಮೀಸಲಿಟ್ಟವಳು ಅಮ್ಮ
ಈ ಸಾಲುಗಳು ಎಷ್ಟು ಅರ್ಥ ಪೂರ್ಣವಾಗಿದೆ ಅಲ್ಲವೆ. ಅಮ್ಮನ ಬಗ್ಗೆ ಬರೆಯಲು ಪದಗಳೇ ಸಾಕಾಗುವುದಿಲ್ಲ. ಹಾಗೆಯೇ ಅಮ್ಮನ ಕುರಿತು ಬರೆದ ಪ್ರತಿಯೊಂದು ಸಾಲುಗಳೂ ಅಷ್ಟೇ ಅರ್ಥ ಪೂರ್ಣವಾಗಿರುತ್ತದೆ.
ಅಮ್ಮ, ಮಾತೆ, ತಾಯಿ, ಅಪ್ಪೆ ಹೀಗೆ ತಾಯಿಯನ್ನು ಕರೆಯುವ ಪದ ಎರಡೇ ಆದರೂ ಆ ಪದಕ್ಕಿರುವ ಶಕ್ತಿ ಅಘಾದವಾದದ್ದು.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಈ ಗಾದೆ ಮಾತನ್ನು ಬಲ್ಲದೇ ಇರುವವರಿಲ್ಲ ಪ್ರತಿಯೊಬ್ಬರೂ ಬಲ್ಲವರೇ ಈ ಗಾದೆ ಮಾತಿನ ಒಳ ಅರ್ಥವನ್ನು. ಅದುವೇ ತಾಯಿಯ ಮಹತ್ವ. ಎಷ್ಟೇ ರುಚಿಯಾಗಿ ಅಡುಗೆ ಮಾಡಿದರೂ ಅದಕ್ಕೆ ಉಪ್ಪು ಸೇರಿಸಿದರೆ ನೇ ಅದು ಪರಿಪೂರ್ಣ ಆಗುತ್ತದೆ ಅದೇ ರೀತಿ ಪ್ರತೀಯೊಬ್ಬರ ಜೀವನದಲ್ಲೂ ಎಷ್ಟೇ ಉತ್ತಮವಾದ ಸಂಬಂಧಗಳು, ಬಂಧುಗಳು ಇದ್ದರೂ, ತಾಯಿಯಂತೆ ಸಲಹಿ, ಜೀವನದ ಪಾಠ ಕಲಿಸುವ ಬಂಧುಗಳು ಮತ್ತೊಬ್ಬರು ಇರಲಿಕ್ಕಿಲ್ಲ.
ಒಂದು ಹೆಣ್ಣು ಒಂದು ಮಗುವಿಗೆ ಜನ್ಮ ನೀಡಿದ ಕೂಡಲೇ ತಾಯಿಯಾಗಿ ಮರುಜನ್ಮ ಪಡೆಯುತ್ತಾಳೆ. ಮಕ್ಕಳ ಜಗತ್ತಿನಲ್ಲಿ ತನಗಾಗಿ ಕಂಡ ಕನಸಿನ ಜಗತ್ತನ್ನು ಮರೆತು ಮಕ್ಕಳ ಪಾಲನೆ ಪೋಷಣೆಯ ಹೊಸ ಜಗತ್ತಿಗೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿ ಕೊಳ್ಳುತ್ತಾಳೆ. ಒಂದು ಜೀವ ತನ್ನ ಗರ್ಭದಲ್ಲಿ ಸೃಷ್ಟಿಯಾಗುತ್ತಿದೆ ಎಂದು ಅರಿತ ಕೂಡಲೇ ಅವಳು ಆ ಮಗುವಿನ ಭವಿಷ್ಯದ ಬಗೆಗೆ ಕನಸು ಕಾಣುತ್ತಾ ಅದರ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಳ್ಳುತ್ತಾಳೆ. ತನ್ನ ಗರ್ಭದಲ್ಲಿ ಸ್ಥಾನಕೊಟ್ಟು ಅಲ್ಲಿಂದ ಪೋಷಿಸಲು ಆರಂಬಿಸುವ ತಾಯಿ ಮಗು ಜನಿಸಿ ಉನ್ನತ ಸ್ಥರ ತಲುಪುವ ವರೆಗೂ, ಮಕ್ಕಳ ಸಂತೋಷದಲ್ಲಿಯೇ ತನ್ನ ಸಂತೋಷವನ್ನು ಕಾಣುತ್ತಿರುತ್ತಾಳೆ.
ಈ ಭೂಮಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಲ್ಲಿ ಬರುವ ಮೊದಲ ಪದವೇ ಅಮ್ಮಾ. ಹೀಗೆ ತನ್ನ ಮಗುವಿನ ತೊದಲು ನುಡಿಯ ಮೊದಲ ಅಮ್ಮಾ ಎನ್ನುವ ಪದ ಕೇಳುವುದೇ ಆಕೆಯ ಪಾಲಿಗೆ ತುಂಬಾ ಸಂತೋಷದ ಕ್ಷಣವಾಗಿರುತ್ತದೆ.
ಜಗತ್ತಿನಲ್ಲಿ ನಿಸ್ವಾರ್ಥದ ಸೇವೆ ಯಾವುದಾದರೂ ಇದೆ ಎಂದರೆ ಅದು ಅಮ್ಮನ ಸೇವೆ ಮಾತ್ರೆ . ಆಕೆ ಯಾವುದೇ ಸೇವೆಯಲ್ಲಿ ಸ್ವಾರ್ಥತೆ ಇರುವುದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ತಾಯಿಯ ಸೇವೆ ಗೆ ಬೆಲೆ ಕಟ್ಟಲು ಸಾದ್ಯವಿಲ್ಲ.
ಇಂದು ಮಹೋನ್ನತ ಸ್ಥಾನದಲ್ಲಿ ರುವ ಶೇ.90 ರಷ್ಟು ಜನರ ಯಶಸ್ಸಿನ ಹಿಂದೆ ಅವರ ತಾಯಿಯ ಬಹುದೊಡ್ಡ ಪಾತ್ರ ಇದೆ, ಆಕೆಯ ಶ್ರಮದ ಬೆವರಿದೆ, ನಿದ್ದೆಯಿಲ್ಲದ ರಾತ್ರಿ ಇದೆ, ಹಸಿದ ಹೊಟ್ಟೆಯ ತ್ಯಾಗ ವಿದೆ ಎಂದರೆ ಅತಿಶೋಕ್ತಿ ಆಗದು.
ಆಧುನಿಕ ಸಮಾಜದಲ್ಲಿ ತಾಯಿಯಂದಿರು ಇಬ್ಬಗೆಯ ಮಾತ್ರ ನಿರ್ವಹಿಸುತ್ತ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ತಾಯಿಯಂದಿರ ಪ್ರಪಂಚ ತುಂಬಾ ಚಿಕ್ಕದು. ಅವರು ಎಷ್ಟೇ ಹೊರ ಪ್ರಪಂಚದಲ್ಲಿ ದುಡಿದರೂ ಆ ದುಡಿಮೆಯ ಮೂಲ ಉದ್ದೇಶವೇ ಮಕ್ಕಳ ಉತ್ತಮ ಭವಿಷ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗಲೂ ಹಲವೆಡೆ ಮನೆ, ಗಂಡ, ಮಕ್ಕಳ ಆರೈಕೆಯೇ ಜೀವನ. ಅದೇ ಪ್ರಪಂಚದಲ್ಲಿ ಸಂಭ್ರಮಿಸುವ ತಾಯಿಯಂದಿರು ಎಷ್ಟೋ ಮಂದಿ ಇದ್ದಾರೆ. ಆದರೆ ದುರದೃಷ್ಟ ಎಂದರೆಇಂದು ಅದೆಷ್ಟೋ ತಾಯಿಯಂದಿರೂ ಮಕ್ಕಳಿದ್ದರೂ ವೃದ್ದಾಶ್ರಮದಲ್ಲಿ ಬದುಕುತ್ತಿದ್ದಾರೆ. ಮಕ್ಕಳೇ ಪ್ರಪಂಚ ಎಂದು ಬದುಕಿದ ತಾಯಿಗೆ ಇಂದು ತನ್ನ ಮಕ್ಕಳ ಪ್ರಪಂಚದಲ್ಲಿ ಬದುಕಲು ಅವಕಾಶ ಇಲ್ಲದಂತಾಗಿದೆ.
ತಮ್ಮ ಸ್ವಾರ್ಥಕ್ಕಾಗಿ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಮೊದಲು ಒಂದು ಬಾರಿ ಅಂದು ಅವಳು ತನ್ನ ಸ್ವಾರ್ಥ ಬಯಸಿದ್ದರೆ ಇಂದು ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬುದನ್ನು ಯೋಚಿಸಬೇಕಾಗಿದೆ. ಯಾಕೆಂದರೆ ಅಮ್ಮ ಗುರುವಾಗಿ, ಗೆಳತಿಯಾಗಿ ನಮ್ಮನ್ನು ಪೋಷಿಸುತ್ತಾಳೆ. ಅಮ್ಮನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕಿದೆ. ತನ್ನವರಿಗಾಗಿಯೇ ಸದಾ ಮಿಡಿಯುವ ತಾಯಿಯ ಸೇವೆ. ಆಕೆಯ ಕುಟುಂಬಕ್ಕಾಗಿ ಆಕೆಯ ತ್ಯಾಗವನ್ನು ಸ್ಮರಿಸುವ ಹಾಗೂ ಪ್ರತಿಯೊಬ್ಬ ತಾಯಿಯನ್ನೂ ಗೌರವಿಸುವ ಸಲುವಾಗಿ ಪ್ರತೀ ವರ್ಷ ಮೇ ತಿಂಗಳ 2 ನೇ ವಾರವನ್ನು ತಾಯಿಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
ತಮ್ಮ ತಮ್ಮ ಅಮ್ಮಂದಿರನ್ನು ನೆನೆಯಲು, ಅವರಿಗಾಗಿ ಗೌರವ ಸೂಚಿಸಲು ಪ್ರತ್ಯೇಕ ದಿನದ ಅಗತ್ಯವಿಲ್ಲ. ಪ್ರತಿ ದಿನವೂ ಅಮ್ಮಂದಿರ ದಿನವೇ. ಪ್ರತಿ ದಿನ ಮನೆಯಲ್ಲಿ ದೇವರಿಗೆ ಎಷ್ಟೇ ಪೂಜೆ ಸಲ್ಲಿಸಿದರೂ ಶುಭ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋಗುವ ಹಾಗೇ ಈ ದಿನ ಇಡೀ ಪ್ರಪಂಚದ ತಾಯಿಯರನ್ನು ಗೌರವಿಸುವ ದಿನ ಈ ದಿನ ಯಾವುದೋ ಒಬ್ಬ ತಾಯಿಯ ದಿನವಲ್ಲ ಇದು ಪ್ರತಿಯೊಬ್ಬ ತಾಯಿಯ ದಿನವಾಗಿದೆ.
ನಮ್ಮ ಉಡುಪಿ ಟೈಮ್ಸ್ ವತಿಯಿಂದ ಎಲ್ಲಾ ತಾಯಿಯರಿಗೂ “ತಾಯಿಯಂದಿರ ದಿನದ ಶುಭಾಶಯಗಳು”