ಬಿಬಿಎಂಪಿ ವಾರ್ ರೂಂಗೆ ತೆರಳಿ ಕ್ಷಮೆ ಯಾಚಿಸಿದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ಮೇ.7: ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು  ಬಿಬಿಎಂಪಿ ವಾರ್ ರೂಂಗೆ ತೆರಳಿ ಕ್ಷಮೆ ಯಾಚಿಸಿದ್ದಾರೆ ಎಂಬ ಸುದ್ದಿಯೊಂದು ವರದಿಯಾಗಿದೆ.

ಈ ಬಗ್ಗೆ ಮಾಧ್ಯಮವೊಂದು ಸುದ್ದಿ ಪ್ರಸಾರ ಮಾಡಿದ್ದು, ನಿನ್ನೆ ಸಂಜೆ ವಾರ್ ರೂಂಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು “ನನಗೆ ನಿಮ್ಮ ವಿರುದ್ಧ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ, ನನಗೆ ಕೊಟ್ಟ ಲಿಸ್ಟ್‌ ಅನ್ನು ನಾನು ಓದಿದ್ದೇನೆ. ನನ್ನ ಭೇಟಿಯಿಂದ ನಿಮ್ಮಲ್ಲಿ ಯಾರಿಗಾದರೂ ಅಥವಾ ಯಾವುದೇ ಸಮುದಾಯಕ್ಕೆ ನೋವುಂಟಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ಗಮನಕ್ಕೆ ಬಂದ ಬೆಡ್ ಹಂಚಿಕೆ ಹಗರಣದ ತನಿಖೆ ನನಗೆ ಬೇಕಿತ್ತು, ಆದರೆ ನನ್ನ ವರ್ತನೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ” ಎಂದು ಹೇಳಿದ್ದಾರೆಂದು ಉದ್ಯೋಗಿಗಳಿಂದ ತಿಳಿದು ಬಂದಿರುವುದಾಗಿ  ಬಿಬಿಎಂಪಿ ವಾರ್ ರೂಂಗಳಿಗೆ ಉದ್ಯೋಗಿಗಳನ್ನು ಒದಗಿಸುವ ಸಂಸ್ಥೆ ಕ್ರಿಸ್ಟಲ್ ಇನ್ಫೋ ಸಿಸ್ಟಮ್ಸ್ ಎಂಡ್ ಸರ್ವಿಸಸ್‍ನ ಪ್ರಾಜೆಕ್ಟ್ ಮ್ಯಾನೇಜರ್ ಶಿವು ನಾಯ್ಕ್ ತಿಳಿಸಿದ್ದಾಗಿ ವರದಿಯಾಗಿದೆ.

ಎರಡು ದಿನಗಳ ಹಿಂದೆ ಸೂರ್ಯ ಅವರು ಬಿಬಿಎಂಪಿ ವಾರ್ ರೂಮ್‍ಗೆ ತಮ್ಮ ಸಂಸದೀಯ ಕ್ಷೇತ್ರದ ನಾಲ್ಕು ಶಾಸಕರೊಂದಿಗೆ ತೆರಳಿ, ಅಲ್ಲಿನ 16 ಮಂದಿ ಮುಸ್ಲಿಂ ಉದ್ಯೋಗಿಗಳ ಹೆಸರುಗಳನ್ನು ಓದುತ್ತಿದ್ದಂತೆಯೇ ಇಲ್ಲೇನು ಹೆಲ್ಪ್ ಲೈನ್ ಅಥವಾ ಮದ್ರಸಾ ನಡೆಯುತ್ತಿದೆಯೇ ಎಂದು ಒಬ್ಬ ಶಾಸಕ ಪ್ರಶ್ನಿಸಿದ ಘಟನೆಯ ವೀಡಿಯೋ ವೈರಲ್ ಆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ವರದಿ ತಿಳಿಸಿದೆ.

ಇನ್ನು ಬೆಡ್ ಬ್ಲಾಕಿಂಗ್ ದಂದೆಯ ಆರೋಪವನ್ನು ಪರಾಮರ್ಶಿಸಿದಾಗ ಸಂಸದ ಉಲ್ಲೇಖಿಸಿದ 16 ಮಂದಿಯ ಪೈಕಿ ಒಬ್ಬ ಮಾತ್ರ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿದ್ದ ಎಂದು ತಿಳಿದು ಬಂದಿದ್ದು, ಆತ ಕಳೆದ ವಾರವಷ್ಟೇ ತುರ್ತು ರಜೆಯ ಮೇಲೆ ಹೋಗಿದ್ದ ಇನ್ನೊಬ್ಬ ಉದ್ಯೋಗಿಯ ಬದಲಿಗೆ ನೇಮಕಗೊಂಡಿದ್ದ ಎಂದು ತಿಳಿದು ಬಂದಿತ್ತು. ಸಂಸದ ಸೂಚಿಸಿದ ಇತರ 15 ಮಂದಿಯಲ್ಲಿ ಹೆಚ್ಚಿನವರು 20ರ ಅಸುಪಾಸಿನ ವಯಸ್ಸಿನ ಯುವ ಪದವೀಧರರಾಗಿದ್ದರು ಹಾಗೂ ಇಂಡೆಕ್ಸಿಂಗ್, ಹೋಂ ಐಸೊಲೇಶನ್ ಉಸ್ತುವಾರಿ ಹಾಗೂ ಕ್ವಾರಂಟೈನ್ ಅವಧಿ ಪೂರ್ಣಗೊಂಡವರ ಡಿಸ್ಚಾರ್ಜ್ ವಿಚಾರಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿತ್ತು.

Leave a Reply

Your email address will not be published. Required fields are marked *

error: Content is protected !!