ಮಂಗಳೂರು: ಯುವ ವೈದ್ಯೆ, ನವವಿವಾಹಿತೆ ಕೋವಿಡ್ ಸೋಂಕಿಗೆ ಬಲಿ
ಮಂಗಳೂರು ಎ.28: ಯುವ ವೈದ್ಯೆಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಕೇರಳದ ತಲಶೇರಿ ಮೂಲದ ಮಹಾ ಬಶೀರ್ (27) ಮೃತಪಟ್ಟವರು. ಇವರು ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಗರ್ಭಿಣಿಯಾಗಿದ್ದರು. ಇವರ ಪತಿ ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಎಂಡಿಎಸ್ ವಿದ್ಯಾರ್ಥಿಯಾಗಿದ್ದಾರೆ.
ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ರಜೆಯಲ್ಲಿ ತೆರಳಿದ್ದರು. ಊರಿನಲ್ಲಿದ್ದ ವೇಳೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಈ ಘಟನೆಗೆ ಸಂಬಂಧಿಸಿ ಪಂಪ್ ವೆಲ್ ನಲ್ಲಿರುವ ಇಂಡಿಯಾನಾ ಆಸ್ಪತ್ರೆಯ ವೈದ್ಯೆಯೊಬ್ಬರು ಕೋವಿಡ್ ಸೋಂಕಿಗೆ ಮೃತಪಟ್ಟಿರುವುದಾಗಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದೀಗ ಈ ವಿಚಾರವಾಗಿ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ ಲಿಮಿಟೆಡ್ ಪಂಪವೆಲ್ ಇದರ ವ್ಯವಸ್ಥಾಪಕರು ಸ್ಪಷ್ಟೀಕರಣ ನೀಡಿದ್ದು, ಇಂಡಿಯಾನ ಆಸ್ಪತ್ರೆಯ ಡ್ಯೂಟಿ ಡಾಕ್ಟರ್ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ ಎಂಬುದು ತಿಳಿದು ಬಂದಿದೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.
ಕಾನಾಚೂರ್ ಆಸ್ಪತ್ರೆಯಲ್ಲಿ ಸೇವಾನಿರತರಾಗಿದ್ದ ವೈದ್ಯೆಯೊಬ್ಬರು ಅಸೌಖ್ಯ ಕಾರಣ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕೊರೊನಾ ಸೋಂಕಿನ ಪರಿಣಾಮ ಅವರನ್ನು ಹತ್ತು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆಸ್ಪತ್ರೆಯ ತಜ್ಞರ ತಂಡದ ಮೂಲಕ ಉತ್ತಮ ಚಿಕಿತ್ಸೆ ನೀಡಲಾಗಿತ್ತು. ನಮ್ಮ ಎಲ್ಲ ಪ್ರಯತ್ನಗಳ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ವೈದ್ಯೆ ನಿಧನರಾದರು. ನಿಧನರಾದ ವೈದ್ಯೆ ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ದೇಶಕರೊಬ್ಬರ ಸಂಬಂಧಿಯಾಗಿದ್ದರು ಎಂದು ತಿಳಿಸಿದ್ದಾರೆ.