ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ: ವಯಸ್ಕರಿಗಾಗಿ ಕೊರೋನಾ ಹೆಲ್ಪ್ ಲೈನ್ ಆರಂಭ

ಉಡುಪಿ ಎ.28 (ಉಡುಪಿ ಟೈಮ್ಸ್ ವರದಿ): ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಿಂದ ವಯಸ್ಕರಿಗಾಗಿ ಕೊರೋನಾ ಹೆಲ್ಪ್ ಲೈನ್ ನ್ನು ಆರಂಭಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಅವರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ಕಳೆದ ವರ್ಷದಂತೆ ಈ ಬಾರಿಯೂ ಸಂಕಷ್ಟದಲ್ಲಿರುವ ವೃದ್ಧರು ಮತ್ತು ಅಸಹಾಯಕರಿಗೆ 24/7 ಹೆಲ್ಪ್ ಲೈನ್ ಸಂಖ್ಯೆ – 9538886293 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಇರುವ ವೃದ್ಧರು, ಅಸಹಾಯಕರು ಅವರವರ ಪ್ರದೇಶದಲ್ಲಿ ಸಹಾಯ ಪಡೆದುಕೊಳ್ಳುವಂತಾಗಲು ಸ್ವಯಂಸೇವಕರನ್ನು ನೋಂದಾಯಿಸಿಕೊಳ್ಳಲು ತೀರ್ಮಾನಿಸಿದೆ. 

ಕೊರೋನಾ ಕಾರಣಕ್ಕೆ ಭಯ, ಆತಂಕಗಳಿರುವವರು, ಖಚಿತ ಮಾಹಿತಿಗಳಿಲ್ಲದಿರುವವರು ಕೂಡ ಈ ಹೆಲ್ಪ್ ಲೈನ್ ಗೆ ಕರೆ ಮಾಡಿ, ಆ ಮೂಲಕ ತಮಗಿರುವ ಕೋವಿಡ್ ಕುರಿತ ಗೊಂದಲ ಗಳನ್ನು ಪರಿಹರಿಸಿ ಕೊಳ್ಳಬಹುದು ಎಂದು ತಿಳಿಸಿದರು. ಕೊರೋನಾ ರೋಗಸ್ಥಿತಿ ಗಂಭೀರವಾಗುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಭಯ, ಆತಂಕ ಅಥವಾ ಗೊಂದಲ ಉಂಟಾಗದಂತೆ ವೈದ್ಯಕೀಯ ಸೌಲಭ್ಯ, ಜಿಲ್ಲಾಡಳಿತ ಮತ್ತು ವಿವಿಧ ಸರಬರಾಜುದಾರರ ನಡುವೆ ಸಂವಹನ ಬಿಂದುವಾಗಿ ಕಾರ್ಯಾಚರಿಸುವುದು  ಈ ಹೆಲ್ಪ್ ಲೈನ್ ನ ಉದ್ದೇಶವಾಗಿದೆ ಎಂದು ತಿಳಿಸಿದರು.

ಮನೆಗಳಲ್ಲಿ ಏಕಾಂಗಿಯಾಗಿದ್ದು ಅಥವಾ ಸುರಕ್ಷೆಯ ಕಾರಣಕ್ಕೆ ಹೊರಗೆ ತೆರಳಲು ಆಗದ, ಸಹಾಯ ಇಲ್ಲದ ವೃದ್ಧರು, ಕೊರೋನಾ ಕಾರಣಕ್ಕೆ ಐಸೊಲೇಶನ್ ನಲ್ಲಿ ಇರುವವರಿಗೆ ಅವಶ್ಯಕ ವಸ್ತು, ಔಷಧ ಕೊರತೆ ಇದ್ದರೆ ಅದನ್ನು ತಂದುಕೊಡುವ ಅಥವಾ ಅವರ ತುರ್ತು ವೈದ್ಯಕೀಯ ಅಗತ್ಯ ಪೂರೈಸುವ ಮತ್ತು ಅವರಿಗೆ ಧೈರ್ಯ ತುಂಬುವ ಜವಾಬ್ದಾರಿ ತೆಗೆದುಕೊಳ್ಳಲು ಆಸಕ್ತಿ ಇರುವ ಯುವಕ- ಯುವತಿಯರು ಸ್ವಯಂಸೇವಕರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9538886291/9538886293 ಸಂಪರ್ಕಿಸಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!