ಕುಂದಾಪುರ: ಲಯನ್ಸ್ ಜಿಲ್ಲೆ 317ಸಿಯ 18ನೇ ಜಿಲ್ಲಾ ಸಮ್ಮೇಳನ ಸಂಪನ್ನ

ಉಡುಪಿ ಎ.22 (ಉಡುಪಿ ಟೈಮ್ಸ್ ವರದಿ): ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಸಿಯ ಹದಿನೆಂಟನೆಯ ಜಿಲ್ಲಾ ಸಮ್ಮೇಳನ “ಆರಾಧ್ಯ”ದ ಕುಂದಾಪುರದ ಸಹನಾ ಕನ್ವೇಂಶನ್ ಸೆಂಟರಿನಲ್ಲಿ ನಡೆಯಿತು.  ಈ ಸಮ್ಮೇಳನವನ್ನು ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಲಯನ್ ಸಂಧ್ಯಾ ಹೆಗಡೆ ಮತ್ತು ಆರಾಧ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ, ಸಮ್ಮೇಳನದಲ್ಲಿ ಮುಖ್ಯ  ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಸಾಮಾಜಿಕ ಹೋರಾಟಗಾರರಾದ ಹೊನ್ನಾವರದ ಕೃಷ್ಣ ಮೂರ್ತಿ ಹೆಬ್ಬಾರ್ ಅವರು, ರಾಗ, ದ್ವೇಷಗಳನ್ನು ಮೀರಿ, ಸರ್ವರ ಹಿತಕ್ಕಾಗಿ ಮಮತೆಯಿಂದ ಶ್ರಮಿಸಿ, ಮನುಜನಾಗುವುದೇ ಬಾಳಿನ ಗುರಿ. ಇಂತಹ ಧೈಯೋದ್ದೇಶಗಳನ್ನು ಹೊತ್ತು, ಕಾರ್ಯ ನಿರತರಾಗಿರುವ ಲಯನ್ಸ್ ಸಂಸ್ಥೆಗಳ ಪಾತ್ರ ಸ್ತುತ್ಯಾರ್ಹ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಎಮ್. ಹೆಗಡೆ ಅವರು ಮಾತನಾಡಿ,  ಜಿಲ್ಲೆಯಲ್ಲಿ ಆದ ಮಹತ್ವದ ಪರಿವರ್ತನೆಗಳನ್ನು ಮತ್ತು ಸಾಧನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಇದೇ ವೇಳೆ  ಕ್ಲಬ್ ವಿಸ್ತರಣೆ, ಮಹಿಳಾ ಕ್ಲಬ್‍ಗಳ ಸ್ಥಾಪನೆ, ಸದಸ್ಯತ್ವ ವೃದ್ಧಿ, ಲಿಯೋ ಕ್ಲಬ್‍ಗಳ ಸಂಖ್ಯೆಯಲ್ಲಾದ ಅಭೂತಪೂರ್ವ ಪ್ರಗತಿಗೆ ‘ನಾನು’ ಎಂಬ ಸಂಕುಚಿತ ಮನೋಭಾವದಿಂದ ‘ನಾವು’ ಎಂಬ ಸಾಂಘಿಕ ಪ್ರಯತ್ನವೇ ಕಾರಣವೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಸಂಸ್ಥೆಯ ಅಂತರಾಷ್ಟ್ರೀಯ ನಿರ್ದೇಶಕ ಲಯನ್ ಆರ್. ಸಂಪತ್ ಅವರು ಜಾಗತಿಕ ಮಟ್ಟದಲ್ಲಿ ಲಯನ್ಸ್ ಸಂಸ್ಥೆಯ ಸಾಧನೆಗಳ ಕುರಿತು ಸಂಪಕ್ಷಿಪ್ತವಾಗಿ ಮಾಹಿತಿ ನೀಡಿ, ದೇಶಕ್ಕೆ ಲಯನ್ಸ್ ಸಂಸ್ಥೆಯ ಕೊಡುಗೆಯನ್ನು ಸ್ಮರಿಸಿದರು.

ಇನ್ನೊರ್ವ ಅತಿಥಿಯಾಗಿ ಭಾಗವಹಿಸಿದ ಮಾಜಿ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷರಾದ ಲಯನ್ ಡಾ. ಜಿ. ರಾಮದಾಸ ರೈಯವರು ಮಾತನಾಡಿ, ಅಭಿವೃದ್ಧಿಯ ಹಾದಿಯಲ್ಲಿ ಲಯನ್ಸ್ ಸಂಸ್ಥೆಯ ಮುಂದಿರುವ ಸವಾಲುಗಳು ಮತ್ತು ಪರಿಹಾರದ ಮಾರ್ಗೋಪಾಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಹಿರಿಯ ಕ್ರೀಡಾಪಟು  ಬಾಬು ಶೆಟ್ಟಿ ಮತ್ತು ರಾಜ್ಯ ಪ್ರಶಸ್ತಿ ವಿಜೇತ ವನಪಾಲಕರಾದ ಬಿ. ಆರ್. ಪ್ರಾಜೆಕ್ಟ್‍ನ ಅಂತೋಣಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ, ಹೆಬ್ರಿಸಿಟಿ ಮತ್ತು ಕೋಟೇಶ್ವರ ಲಯನ್ಸ್ ಕ್ಲಬ್‍ಗಳಿಂದ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗಳಿಗೆ ಸಹಾಯವನ್ನು ನೀಡಲಾಯಿತು. ಈ ವೇಳೆ ಬಾಲ ಕಲಾವಿದರಾದ ಮಾಸ್ಟರ್ ಅರುಷ್ ಶೆಟ್ಟಿಯವರ ಯಕ್ಷಗಾನ ನೃತ್ಯ,  ಆವನಿ ಮತ್ತು ತಂಡದವರ ನೃತ್ಯ ಪ್ರದರ್ಶನಗಳು ಅದ್ಭುತವಾಗಿ ಮೂಡಿಬಂದವು.

ಈ ಸಂದರ್ಭದಲ್ಲಿ ಹಿರಿಯ ಲಯನ್ ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟ. ಜಿ. ಆಚಾರ್ಯ, ಜಿಲ್ಲಾ ಕಾರ್ಯಕಾರಿ ಸಂಘಟ ಕಾರ್ಯದರ್ಶಿ ಲಯನ್ ರವಿರಾಜ ನಾಯಕ್, ಲಯನ್ ಕಿರಣ್ ರಂಗಯ್ಯ, ಲಯನ್ ಅಕ್ಷಯ್ ಹೆಗ್ಡೆ ಮತ್ತು ಲಿಯೋ ನಿಹಾಲ್ ಹೆಗಡೆ, ಲಯನ್ ದಿನಕರ ಶೆಟ್ಟಿ, ಲಯನ್ ವಿಶ್ವನಾಥ ಶೆಟ್ಟಿ, ಲಯನ್ ಪ್ರಕಾಶ್ ಟ. ಸೋನ್ಸ್  ಜಿಲ್ಲೆಯ ಹಿರಿಯ ಲಯನ್ಸ್ ನಾಯಕರು, ಸಂಪುಟ ಸದಸ್ಯರು ಮತ್ತು ಕ್ಲಬ್ ಪದಾಧಿಕಾರಿಗಳು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *

error: Content is protected !!