ರಂಗ ಕಲಾವಿದ ಬಾರ್ಕೂರು ಕಾಲೇಜ್’ನ ಗುಮಾಸ್ತ ಗುರುರಾಜ್ ರಾವ್ ಬಿ ನೇಣು ಬಿಗಿದು ಆತ್ಮಹತ್ಯೆ

ಬ್ರಹ್ಮಾವರ ಎ.22 (ಉಡುಪಿ ಟೈಮ್ಸ್ ವರದಿ): ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಗುರುರಾಜ್ ರಾವ್ ಬಿ. (47) ಆತ್ಮಹತ್ಯೆ ಮಾಡಿಕೊಂಡವರು. ವಿಪರೀತ ಶರಾಬು ಕುಡಿಯುವ ಅಭ್ಯಾಸ ಹೊಂದಿದ್ದರು. ಆದ್ದರಿಂದ ಕುಡಿತ ಬಿಡಿಸುವ ಬಗ್ಗೆ ಕೋಟದ ಪರಿವರ್ತನಾ ಕೇಂದ್ರ ಹಾಗೂ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಆದರೆ ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳದೇ ಮಾನಸಿಕವಾಗಿ ವಿಚಲಿತರಾಗಿದ್ದರು. ಅಲ್ಲದೆ ಆಸಿಡಿಟಿ ಸಮಸ್ಯೆಯಿಂದ ಕಳೆದ 2, 3 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದರು. ಇವರು ಶರಾಬು ಕುಡಿತ ನಿಲ್ಲಿಸಿದ ಮೇಲೆ ಮಾನಸಿಕವಾಗಿ ವಿಚಲಿತರಾದ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ಎ.21 ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್ಕೂರು ಎನ್.ಜೆ.ಸಿ ಕಾಲೇಜ್‍ನಲ್ಲಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ ಇವರು ತಮ್ಮ ಪರಿಚಿತ ಬಳಗದಲ್ಲಿ ಗುಗ್ಗು ಎಂದೇ ಚಿರಪರಿಚಿತರಾಗಿದ್ದರು. ಇವರು ಓರ್ವ ಉತ್ತಮ ರಂಗ ಕಲಾವಿದರಾಗಿದ್ದುದು ಮಾತ್ರವಲ್ಲದೆ ನಾಟಕಗಳನ್ನು ನಿರ್ದೇಶನ ಮಾಡುತ್ತಿದ್ದರು. ಇವರು ನಿರೂಪಣೆ ಹಾಗೂ ಹಾಡುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮತ್ತು ಸಾಹಿತಿಯಾಗಿ ಚಿತ್ರ ನಟರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಬಾರ್ಕೂರು ಪರಿಸರದಲ್ಲಿ ಎಲ್ಲಾ ಧಾರ್ಮಿಕ, ಸಾಂಸ್ಕøತಿಕ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು. ಇದೀಗ ಇವರ ಅಗಲಿಕೆ ಇವರ ಅಪಾರ ಅಭಿಮಾನಿಗಳಿಗೆ ನೋವು ತಂದಿದೆ. ಇವರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!