‘ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?’: ಸಿದ್ದರಾಮಯ್ಯ ಕಿಡಿ
ಬೆಂಗಳೂರು: ‘ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಕ್ಷಣ ಕ್ಷಣಕ್ಕೂ ಬದಲಾಗುವ ಸರ್ಕಾರದ ನಿರ್ಧಾರ, ಮಾರ್ಗಸೂಚಿಗಳು, ಅಘೋಷಿತ ಲಾಕ್ ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ’ ಎಂದು ಟೀಕಿಸಿದ್ದಾರೆ.
‘ಆಡಳಿತ ನಡೆಸಲಾಗದಿದ್ದರೆ ಕುರ್ಚಿ ಬಿಟ್ಟು ತೊಲಗಿ, ಜನರನ್ನು ಯಾಕೆ ಗೋಳು ಹೊಯ್ಕೊಳ್ತೀರಿ’ ಎಂದು ಯಡಿಯೂರಪ್ಪ ಅವರನ್ನು ಕುಟುಕಿದ್ದಾರೆ.
‘ಕೊರೊನಾ ಉಲ್ಬಣಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೊನಾ ಓಡಿಹೋಗುವುದೇ? ಲಾಕ್ ಡೌನ್, ಬಂದ್, ಕರ್ಪ್ಯೂ, ಇನ್ನೇನೋ.. ಯಾವ ನಿರ್ಧಾರ ಕೈಗೊಳ್ಳುವುದಿದ್ದರೂ ಜನರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವ ಸಿದ್ಧತೆಯೊಂದಿಗೆ ಮಾಡಿ. ತಟ್ಟೆ ಬಡಿಯುವ, ಕ್ಯಾಂಡಲ್ ಹಚ್ಚುವ ಶೈಲಿಯ ಇಂಥ ತುಘಲಕ್ ದರ್ಬಾರ್ ಪುನರಾವರ್ತನೆ ಮಾಡಬೇಡಿ’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.