ಮದುವೆ ಸಮಾರಂಭಕ್ಕೆ ಭಾಗವಹಿಸಲು ಆಧಾರ್ ಕಡ್ಡಾಯವಿಲ್ಲ, 50 ಜನರ ಪಟ್ಟಿ ನೀಡಲು ಆದೇಶ

ಉಡುಪಿ ಎ.23 (ಉಡುಪಿ ಟೈಮ್ಸ್ ವರದಿ): ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಭಾವವನ್ನು ನಿಯಂತ್ರಿಸುವ ಸಲುವಾಗಿ ಅನೇಕ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ ಅವುಗಳಲ್ಲಿ ಹೆಚ್ಚು ಜನ ಸೇರಬಹುದಾದ ಮದುವೆ ಕಾರ್ಯಕ್ರಮಕ್ಕೆ ವಿಧಿಸಿರುವ ನಿಯಮ ಕುರಿತಂತೆ ಸಾರ್ವಜನಿಕರಲ್ಲಿ ಅನೇಕ ಗೊಂದಲ ಮೂಡಿತ್ತು.

ಯಾಕೆಂದರೆ ವಾರಂತ್ಯ ಲಾಕ್‍ಡೌನ್ ಆದೇಶದ ನಂತರ ವಾರಂತ್ಯದಲ್ಲೇ ಹೆಚ್ಚಾಗಿ ನಡೆಯುವ ವಿವಾಹ ಸಮಾರಂಭಗಳ ಕುರಿತು ಈಗಾಗಲೆ ನಿಗದಿಯಾಗಿರುವ ಮದುವೆ ಹಾಗೂ ಮುಂದೆ ನಡೆಯಬಹುದಾದ ಮದುವೆ ಕಾರ್ಯಕ್ರಮಗಳನ್ನು ಹೇಗೆ ನಡೆಸುವುದು, ಇದಕ್ಕೆ ಪ್ರತ್ಯೇಕ ನಿಯಮ ಇರಬಹುದೇ, ಪಾಸ್ ಪಡೆಯುವುದು ಹೇಗೆ ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಅದಕ್ಕೆ ಪೂರಕವಾಗಿ ಮದುವೆ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಭಾಂಗಣದ ಒಳಗೆ ಹಾಗೂ ಹೊರಾಂಗಣಕ್ಕೆ ಎಂದು ಪ್ರತ್ಯೇಕ ಜನರ ಮಿತಿಯನ್ನು ಸರಕಾರ ನಿಗದಿಪಡಿಸಿದೆ. ಇದರೊಂದಿಗೆ ಮದುವೆ ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ಕಡ್ಡಾಯ ಎಂದೂ ತಿಳಿ ಸಿದೆ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಮದುವೆಯ ಅನುಮತಿಗಾಗಿ ನಿಯೋಜಿತ ಅಧಿಕಾರಿಯ ಬಳಿಗೆ ಹೋಗಬೇಕು. ಮದುವೆಗೆ ಆಗಮಿಸುವ 50 ಮಂದಿಯ ಆಧಾರ್ ಕಾರ್ಡ್‍ನ್ನು ನೀಡಬೇಕು. ಅದರ ಆಧಾರದಲ್ಲಿ 50 ಪಾಸ್‍ಗಳನ್ನು ನೀಡಲಾಗುತ್ತದೆ. ಮದುವೆಗೆ ಆಗಮಿಸುವವರು ಪಾಸ್ ತೋರಿಸಿದರಷ್ಟೇ ಪೊಲೀಸರು ಅವಕಾಶ ನೀಡುತ್ತಾರೆ.

ಮದುವೆ ಮನೆಗೆ ನೋಡೆಲ್ ಅಧಿಕಾರಿ ಬಂದಾಗ ಪಾಸ್ ರಹಿತರು ಇದ್ದರೆ, ಮಿತಿಗಿಂತ ಹೆಚ್ಚಿನ ಜನ ಇದ್ದರೆ ಕೇಸು ದಾಖಲಿಸಲಾಗುತ್ತದೆ ಎನ್ನುವುದು ಸದ್ಯದ ನಿಯಮ. ಆಮಂತ್ರಣ ಪತ್ರಿಕೆ ನೀಡುವಾಗ ಆಧಾರ್ ಸಂಗ್ರಹಿಸುವ ಸಂಕಷ್ಟ ಒಂದೆಡೆಯಾದರೆ ಸೀಮಿತ ಪಾಸ್ ಪಡೆದು ಆಮಂತ್ರಿತರಿಗೆ ಬರಲು ಸಾಧ್ಯವಾಗದೇ ಇದ್ದಾಗ ಬದಲಿಗೆ ಬೇರೆಯವರೂ ಬರುವಂತಿಲ್ಲ ಎಂಬ ಸಮಸ್ಯೆಯೂ ಇಲ್ಲಿ ಕಾಡುತ್ತಿದೆ. ಈ ನಡುವೆ ನಿಯಮಗಳಿಗೆ ಸಂಬಂಧಿಸಿ ಜಿಲ್ಲಾದಿಕಾರಿ ಜಿ. ಜಗದೀಶ್ ಅವರು ಪ್ರತಿಕ್ರಿಯೆ ನೀಡಿದ್ದು ಮದುವೆಗೆ ಅನುಮತಿ ಪಡೆಯಲು ಸಮಾರಂಭಕ್ಕೆ ಆಗಮಿಸುವ 50 ಜನರ ಹೆಸರಿನ ಪಟ್ಟಿಯನ್ನಷ್ಟೇ ಸಂಬಂಧಪಟ್ಟ ಅಧಿಕಾರಿಗೆ ನೀಡಬೇಕು. ಅವರಿಗೆ ಪಾಸ್ ನೀಡಲಾಗುವುದು. ಆಧಾರ್ ಕಡ್ಡಾಯ ಅಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಸರು ಮಾತ್ರ ಪಡೆದುಕೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿರೋದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!