ವೀಕೆಂಡ್ ಲಾಕ್ ಡೌನ್- ಸಣ್ಣ ಉದ್ಯಮಗಳಿಗೆ ದೊಡ್ಡ ಹೊಡೆತ

ಉಡುಪಿ ಎ.21(ಉಡುಪಿ ಟೈಮ್ಸ್ ವರದಿ): ಅರ್ಥ ವ್ಯವಸ್ಥೆಯಲ್ಲಿ ಯಾವುದಾದರು ಒಂದು ಕ್ಷೇತ್ರದ ಅವನತಿಯಾದರೆ ಅದರ ಪರಿಣಾಮ ಆ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಅದು  ಇತರ ಎಲ್ಲಾ ಕ್ಷೇತ್ರಗಳ ಕಾರ್ಯ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಈ ಮೂಲಕ ಇಡೀ ಅರ್ಥ ವ್ಯವಸ್ಥೆಯೇ ಬುಡಮೇಲು ಆಗುವಂತೆ ಮಾಡುತ್ತದೆ.

ಇದಕ್ಕೆ ಸದ್ಯದ ಕೋವಿಡ್ ಪರಿಸ್ಥಿತಿಯೇ ಉತ್ತಮ ನಿದರ್ಶನ. ಕಳೆದ ವರ್ಷ ಕೋವಿಡ್ ಎಲ್ಲೆಡೆ ಅಟ್ಟಹಾಸ ಮೆರೆಯುವ ಮೂಲಕ ಎಲ್ಲರ ಯೋಜನೆಗಳನ್ನು ತಲೆಕೆಳಗಾಗುವಂತೆ ಮಾಡಿದ್ದು ಸುಳ್ಳಲ್ಲ. ಕ್ರಮೇಣ ಕೋವಿಡ್ ಪ್ರಭಾವ ಕಡಿಮೆಯಾಗಿ ಎಲ್ಲಾ ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನೇನು ಎಲ್ಲವೂ ಮೊದಲಿನಂತಾಗುತ್ತದೆ ಎನ್ನುವಾಗಲೇ ಮತ್ತೆ ಒಕ್ಕರಿಸಿತು ಕೊರೋನಾ 2ನೇ ಅಲೆ.

ದೇಶದಾದ್ಯಂತ ಮತ್ತೆ ಮಿತಿ ಮೀರಿ ಹರಡುತ್ತಿರುವ ಕೋವಿಡ್ ಸೋಂಕು ಮೊದಲ ಅಲೆಯಿಂದ ತತ್ತರಿಸಿ ಚೇತರಿಸಿಕೊಳ್ಳುತ್ತಿದ್ದ ಅನೇಕ ಉದ್ಯಮಗಳಿಗೆ ಮತ್ತೆ ಹೊಡೆದ ಬೀಳುವಂತೆ ಮಾಡಿದೆ. ಇತ್ತ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿ ಮೂಲಕ ಕ್ರಮಕ್ಕೆ ಮುಂದಾಗಿರುವ ಸರಕಾರ ಜಾರಿ ಮಾಡಿರುವ ಕಠಿಣ ನಿಯಮಗಳು ಜನರ ಆರೋಗ್ಯ ದೃಷ್ಟಿಯಿಂದ ಪರಿಣಾಮಕಾರಿಯಾದ್ರೆ, ಜೀನವ ನಿರ್ವಹಣೆಯ ಉದ್ಯಮಕ್ಕೆ ಪೆಟ್ಟು ನೀಡಿದಂತಾಗುತ್ತಿದೆ.

ಇದೀಗ ವಾರಾಂತ್ಯ ಲಾಕ್‍ಡೌನ್ ನಿಂದ ಮತ್ತೆ ಅನೇಕರ ಜೀವನ ನಿರ್ವಹಣೆಯ ಮೂಲಕ್ಕೆ ಪೆಟ್ಟು ಬಿದ್ದಂತಾಗಿದೆ. ಮದ್ಯಮ ವರ್ಗದವರು, ಬಡವರು ಕಷ್ಟ ಪಡುವಂತಾಗಿದೆ. ಆಟೋ ಚಾಲಕರು, ಸಣ್ಣ ವ್ಯಾಪಾಸ್ಥರು, ಕ್ಯಾಬ್ ಚಾಲಕರು ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಗೂ ಮಿತಿ ಹೇರಿರುವುದರಿಂದ ಫೋಟೋಗ್ರಾಫರ್ಸ್, ವಾದ್ಯ, ಕೇಟ್ರಿಂಗ್, ಶಾಮಿಯಾನ ಹೀಗೆ ಮೊದಲಾದ ಸಣ್ಣ ಉದ್ಯಮಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇತ್ತ ವಾರಾಂತ್ಯದಲ್ಲಿ ಕಡಲ ಕಿನಾರೆ, ದೇವಸ್ಥಾನ, ಪ್ರಸಿದ್ದ ಪ್ರವಾಸಿ ತಾಣಗಳಿಗೆ ತೆರಳುವ ಹವ್ಯಾಸ ಹೊಂದಿರುವವರಿಗೆ ಈ ವೀಕೆಂಡ್ ಲಾಕ್ ಡೌನ್ ಮನೆಯಲ್ಲೇ ಕಟ್ಟಿ ಹಾಕಿದಂತಾಗಿದೆ.

ಆದರೆ ಇದು ಮತ್ತೊಂದು ಕಡೆಯಲ್ಲಿ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ.  ವೀಕೆಂಡ್ ಲಾಕ್ ಡೌನ್ ನಿಂದ ಪ್ರವಾಸಿತಾಣಗಳು, ಹೋಟೆಲ್ ಗಳು ಮುಚ್ಚಲಿದೆ. ಈಗಾಗಲೇ ಗ್ರಾಹಕರ ಕೊರತೆಯಿಂದ ಹೊಟೇಲ್ ಮಾಲಿಕರು ನಷ್ಟ ಅನುಭವಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂಧ ಇದು ಸ್ವಾಭಾವಿಕವಾಗಿ ಆರ್ಥಿಕತೆ ಮೇಲೆ ಪ್ರಭಾವ ಬೀರಲಿದೆ.

ಇದು ಸದ್ಯದ ಕೋವಿಡ್ ಪರಿಸ್ಥಿತಿ. ಸದ್ಯ ಈ ವಾರಾಂತ್ಯ ಲಾಕ್‍ಡೌನ್ ಮೇ.4 ವರೆಗೆ ಜಾರಿಯಲ್ಲಿ ಇರಲಿದ್ದು ಅಲ್ಲಿಯ ನಂತರದ ಪರಿಸ್ಥಿತಿ ಏನು..? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅಂದುಕೊಂಡಂತೆ ಕೋವಿಡ್ ನಿಯಂತ್ರಣಕ್ಕೆ  ಬಂದರೆ ಸಮಸ್ಯೆಗೊಂದು ಅಂತ್ಯ ಸಿಗಬಹುದು. ಅಥವಾ ನಮ್ಮ ಊಹೆಗೂ ಮೀರಿ ಮತ್ತಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾದರೆ ಸಮಸ್ಯೆಗಳು ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಸಂದೇಹಾನೆ ಇಲ್ಲ .

Leave a Reply

Your email address will not be published. Required fields are marked *

error: Content is protected !!