ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಬಿಜೆಪಿ ಸಂಸ್ಕಾರ: ಅಶೋಕ್ ಕೊಡವೂರು
ಉಡುಪಿ, ಎ.22(ಉಡುಪಿ ಟೈಮ್ಸ್ ವರದಿ) ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಬಿಜೆಪಿಯ ಸಂಸ್ಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಈ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಆಡಳಿತಾವಧಿಯ ಯುಪಿಎ ಸರಕಾರದ ಕಾಂಗ್ರೇಸ್ ಪಕ್ಷದ ಸಾಧನೆಯೇ ಹೊರತು ಬಿಜೆಪಿಯದ್ದಲ್ಲ. ಯುಪಿಎ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿಯವರ ವಿಶೇಷ ಕಾಳಜಿಯೊಂದಿಗೆ 2009ರಲ್ಲಿ ಪ್ರಸ್ತಾವನೆಗೊಂಡ ಈ ಯೋಜನೆಯನ್ನು 2011 ಮತ್ತು 2012 ರಲ್ಲಿ ಬಹಳಷ್ಟು ತಿದ್ದುಪಡಿಯೊಂದಿಗೆ ಲೋಕಸಭೆಯಲ್ಲಿ ಮಂಡಿಸಿದಾಗ ವಿರೋಧ ವ್ಯಕ್ತಪಡಿಸಿ ಈ ಮಸೂದೆ ಜಾರಿಯಾಗದಂತೆ ಬಿಜೆಪಿ ನೋಡಿಕೊಂಡಿತ್ತು.
ಮತ್ತೆ 2013ರ ಜುಲೈ ತಿಂಗಳಲ್ಲಿ ಅನ್ಯಪಕ್ಷಗಳ ಸಹಕಾರದೊಂದಿಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ಈ ಮಸೂದೆಯನ್ನು ಜಾರಿಗೆ ತಂದಿತ್ತು. 2013 ರಲ್ಲಿ ದೇಶದ ಶೇ. 78 ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಗುರಿಯೊಂದಿಗೆ ಜಾರಿಗೆ ಬಂದ ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿಯೇ ರಾಜ್ಯದ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನ್ನಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಇಂದಿರಾ ಕ್ಯಾಂಟಿನ್, ಕ್ಷೀರಭಾಗ್ಯ ಮೊದಲಾದ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಆಗಲೂ ಉಚಿತ ಆಹಾರ ಜನರನ್ನು ಉದಾಸೀನತೆಯೆಡೆಗೆ ದೂಡುತ್ತದೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಬಿಜೆಪಿ ಸರಕಾರದ ಪ್ರಾಯೋಜಿತ ಯೋಜನೆಯಲ್ಲ. ಸುಳ್ಳು ಹೇಳಿ ಜನರನ್ನು ದಿಕ್ಕುತಪ್ಪಿಸುವುದು ಬಿಜೆಪಿಯ ಸಂಸ್ಕಾರ ಎಂದು ಹೇಳಿದ್ದಾರೆ.
ಇದನ್ನು ಹೊರತುಪಡಿಸಿ ಆ ಅವಧಿಯಲ್ಲಿ ಯು.ಪಿ.ಎ. ಸರಕಾರ ಜಾರಿಗೆ ತಂದ ಆಧಾರ್ ಕಾರ್ಡ್, ಉದ್ಯೋಗ ಖಾತ್ರಿ ಯೋಜನೆಯೇ ಮೊದಲಾದ ಹತ್ತು ಹಲವು ಯೋಜನೆಗಳನ್ನು ಟೀಕಿಸುತ್ತಲೇ ಬಂದ ಬಿಜೆಪಿ ಇದೀಗ ಆ ಯೋಜನೆಗಳ ಹೆಸರು ಬದಲಿಸಿ, ತಮ್ಮದ್ದೇ ಯೋಜನೆಗಳೆಂದು ಹೇಳುತ್ತಿರುವುದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಭೂಷಣ ಅಲ್ಲ. ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಇದಕ್ಕೊಂದು ಉದಾಹರಣೆ ಎಂದು ಅವರು ಹೇಳಿದ್ದಾರೆ.
ಕೋರೋನಾ ಆರ್ಥಿಕ ಸಂಕಷ್ಟವನ್ನು ಮುಂದಿರಿಸಿಕೊಂಡು, ಅನ್ನಭಾಗ್ಯ ಯೋಜನೆಯಡಿಯಲ್ಲಿ ಈಗಾಗಲೇ 7 ಕೆಜಿ ಇದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದು, ಈಗ ಅದನ್ನು ಸತ್ವಯುತ ಆಹಾರ ನೀಡಿಕೆಯ ಅಪರಗುರಿಯೊಂದಿಗೆ ಅಕ್ಕಿಯನ್ನು 2 ಕೆಜಿಗೆ ಇಳಿಸಿ, ಅದರೊಂದಿಗೆ ರಾಗಿ ಮತ್ತು ಗೋಧಿಯನ್ನು ಕೊಡುವ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇದರ ಹೊರತಾಗಿಯೂ ದೇಶಾದ್ಯಂತ ಕೋವಿಡ್ ಲಸಿಕೆಗಳ ಅಲಭ್ಯತೆ, ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಮಾತ್ರೆಗಳ ಕೊರತೆ ದೇಶದ ಕೊರೋನಾ ಭಾದಿತರನ್ನು ಆತಂಕದಲ್ಲಿರಿಸಿದೆ. ತನ್ನದ್ದೇ ಪಕ್ಷದ ಆಂತರಿಕ ವ್ಯವಹಾರ, ಅದೇ ಪಕ್ಷದ ಅಧ್ಯಕ್ಷರೊಬ್ಬರ ಗಮನಕ್ಕೆ ಬಾರದಿರುವುದು ವಿಷಾದನೀಯ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.