ಉಡುಪಿ ಜಿಲ್ಲಾಡಳಿತದಿಂದ ತುಳು ಭಾಷೆಗೆ ಪ್ರೋತ್ಸಾಹ – ಡಿಸಿ ಭರವಸೆ

ಉಡುಪಿ: ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಬೇಕು ಮತ್ತು  ಉಡುಪಿ ಜಿಲ್ಲಾಡಳಿತದಲ್ಲಿ ತುಳುಭಾಷೆಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ತುಳು ಭಾಷಾಪರ ಸಂಘಟನೆಗಳು ಶನಿವಾರ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಪ್ರಾದೇಶಿಕ ಭಾಷೆಗಳು ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸಲು ಪೂರಕವಾಗಬಲ್ಲವು. ಸಾವಿರಾರು ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡ ಭಾಷೆಗಳಲ್ಲೇ ಅತ್ಯಂತ ಪುರಾತನ ಎಂದು ಪರಿಗಣಿಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ತಾನು ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಆಕಾಶರಾಜ್ ಜೈನ್ ಅವರು ತುಳು ಲಿಪಿಯಲ್ಲಿ ಬರೆದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನಾಮಫಲಕವನ್ನು ಹಸ್ತಾಂತರಿಸಿದರು, ಈ ನಾಮಫಲಕ ಸದಾ ತನ್ನ ಮೇಜಿನ ಮೇಲಿರಿಸುತ್ತೇನೆ ಎಂದು ಡಿಸಿ ಹೇಳಿದರು.

ಅಕಾಡೆಮಿಯ ಇನ್ನೊಬ್ಬ ಸದಸ್ಯೆ ತಾರಾ ಉಮೇಶ್ ಆಚಾರ್ಯ ಅವರು ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದರು. ಇದಕ್ಕೆ ಡಿಸಿ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.

ಜೈ ತುಳುನಾಡ್ ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕರಾದ ಅಕ್ಷತಾ ಕುಲಾಲ್,  ಶರತ್ ಕೊಡವೂರು, ತುಳುಕೂಟ ಉಡುಪಿ ಪರವಾಗಿ ಕಾರ್ಯದರಶಿ ಗಂಗಾಧರ್ ಕಿದಿಯೂರು, ಸ್ಥಾಪಕ ಸದಸ್ಯ ಯು.ಜಿ. ದೇವಾಡಿಗ ಅವರು ಮನವಿ ಸಲ್ಲಿಸಿದರು. ಕೊಡವೂರು ಯುವಕ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ತುಳುಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!