ಉಡುಪಿ: ಕೋವಿಡ್ -19 ನಿಯಮಗಳ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿಗೆ ಅಧಿಕಾರಿಗಳ ನೇಮಕ

ಉಡುಪಿ ಎ.17(ಉಡುಪಿ ಟೈಮ್ಸ್ ವರದಿ):  ಉಡುಪಿ ಜಿಲ್ಲೆಯಲ್ಲಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ -19 ನಿಯಮಗಳ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ನಿಟ್ಟಿನಲ್ಲಿ ಇಲಾಖಾವಾರು ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿ ಆದೇಶಿಸಲಾಗಿದೆ. 

ಅದರಂತೆ ಪೊಲೀಸ್ ಇಲಾಖೆ , ನಗರಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ, ಅಬಕಾರಿ ಇಲಾಖೆ , ಮೀನುಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾರಿಗೆ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಎಪಿಎಂಸಿ , ಶಿಕ್ಷಣ ಇಲಾಖೆ ಗಳ ವಿವಿಧ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇಂತಹ ಸ್ಥಳಗಳಲ್ಲಿ ದಂಡ ವಿಧಿಸಿ ಸಂಗ್ರಹವಾದ ಮೊತ್ತ ಶುಲ್ಕ, ಜುಲ್ಮಾನೆಗಳಮೊತ್ತವನ್ನು ಜಮೆ ಮಾಡಿರುವ ಬಗ್ಗೆ ಇಲಾಖಾವಾರು ಕ್ರೋಢೀಕೃತ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಅಧಿಕ್ಷಕರಿಗೆ ನೀಡಬೇಕಾಗಿ ಜಿಲ್ಲಾಡಳಿತ ಅದಿಸೂಚನೆಯಲ್ಲಿ ತಿಳಿಸಲಾಗಿದೆ.

ಕೋವಿಡ್ -19 (ಕೋರೋ ವೈರಾಣು ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವುದು ಅತಿ ಅವಶ್ಯಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಖರೀದಿಗೆ, ಕಛೇರಿಗಳ ಕೆಲಸಕ್ಕೆ ತೆರಳುವ, ಮತ್ತಿತರ ಕಾರಣಗಳಿಗಾಗಿ ಸಂಚರಿಸುವ ಸಾರ್ವಜನಿಕರು ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕಾಗಿರುತ್ತದೆ.

 ಆದುದರಿಂದ ಸಾರ್ವಜನಿಕರು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮುಂಜಾಗ್ರತಾ   ಕ್ರಮಗಳಾದ ಮಾಸ್ಕ್ ಅಥವಾ ಫೇಸ್ ಕವರ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ, ಅಂಗಡಿಗಳಲ್ಲಿ ಖರೀದಿಮಾಡುವ ಸಮಯದಲ್ಲಿ, ವಾಹನಗಳಲ್ಲಿ ಸಂಚರಿಸುವ ಸಂದರ್ಭಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. 

ಅದು ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಎಪಿಡಮಿಕ್ ಡಿಸೀಸ್ ರೆಗ್ಯುಲೇಶನ್ ಆಕ್ಟ್ ನಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಈ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ  ಸರ್ಕಾರದ ಆದೇಶದಲ್ಲಿನ ದಂಡದ ಮೊತ್ತವನ್ನು ಪರಿಷ್ಕರಿಸಿ ನಗರ ಸಭೆ, ಪುರಸಭೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರೂ 250.00. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ರೂ 100.00 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಪಾರ್ಟಿ ಹಾಲ್ ಗಳು , ಡಿಪಾರ್ಟ್ ಮೆಂಟಲ್ ಸ್ಟೋರ್ ಗಳಲ್ಲಿ ನಿಯಮ ಉಲ್ಲಂಘನೆಗೆ ರೂ 5000, ಹವಾನಿಯಂತ್ರಿತ ಪಾರ್ಟಿಹಾಲ್ ಗಳು ಡಿಪಾರ್ಟಮೆಂಟಲ್ ಸ್ಕೋರ್ ಗಳು, ಬ್ರಾಂಡೆಡ್ ಶಾಪ್ ಗಳು , ಶಾಪಿಂಗ್ ಮಾಲ್ ಗಳಲ್ಲಿ ರೂ 10,000, ತ್ರಿಸ್ಟಾರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಟಾರ್ ಹೋಟೆಲ್ ಗಳಲ್ಲಿ ರೂ 10,000  ಸಾರ್ವಜನಿಕ ಸಮಾರಂಭಗಳ ಆಯೋಜಕರು, ರ್ಯಾಲಿಗಳು, ಗುಂಪು ಸೇರುವಿಕೆ ಅಥವಾ ಆಚರಣೆಗಳಲ್ಲಿ ರೂ10,000- ದಂಡ ವಿಧಿಸಲು ಅವಕಾಶ ನೀಡಲಾಗಿದೆ.
 

Leave a Reply

Your email address will not be published. Required fields are marked *

error: Content is protected !!