ಪರಿಸರ,ಆರೋಗ್ಯದ ಮೇಲೆ ಯುಪಿಸಿಎಲ್‌ ದುಷ್ಪರಿಣಾಮ- ರೂ.75 ಕೋಟಿ ದಂಡ ವಸೂಲಿಗೆ ತಜ್ಞರ ವರದಿ

ಉಡುಪಿ: ಜಿಲ್ಲೆಯ ಉಡುಪಿ ಪವರ್ ಕಾರ್ಪೊರೇಷನ್‌ ಲಿಮಿಟೆಡ್‌ನಿಂದ (ಯುಪಿಸಿಎಲ್‌) ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಿರುವ ಕಳವಳಕಾರಿ ಅಂಶಗಳು ಎನ್‌ಜಿಟಿ ತಜ್ಞರ ವರದಿಯಲ್ಲಿ ಬಹಿರಂಗವಾಗಿವೆ. ಕಾರ್ಖಾನೆ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶಗಳಲ್ಲಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯು ಕ್ಯಾನ್ಸರ್, ಅಸ್ತಮಾ ಹಾಗೂ ಉಸಿರಾಟದ ಸೋಂಕು ಹೆಚ್ಚಾಗಿರುವ ಆತಂಕಕಾರಿ ವಿಚಾರಗಳನ್ನು ಹೊರಗೆಡವಿದೆ.

ಪಡುಬಿದ್ರಿಯ ಎಲ್ಲೂರಿನಲ್ಲಿರುವ ಯುಪಿಸಿಎಲ್‌ನ 2 ಘಟಕಗಳು ಕಾರ್ಯಾರಂಭ ಮಾಡಿದ (1200 ಮೆಗಾವಾಟ್‌) ಬಳಿಕ ಕಾರ್ಖಾನೆಯ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯು ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಬೀರಿರುವ ಪರಿಣಾಮಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಹಸಿರು ಪೀಠಕ್ಕೆ ಸಲ್ಲಿಸಿದೆ.

2008–09 ಹಾಗೂ 2019–20ರ ಅವಧಿಯಲ್ಲಿ 33 ಗ್ರಾಮಗಳಲ್ಲಿ ಪರಿಶೀಲನೆ ನಡೆಸಿರುವ ಸಮಿತಿಯು ಜನರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ನೀಡಿರುವ ಮಾಹಿತಿಯ ಆಧಾರದಲ್ಲಿ ವರದಿ ತಯಾರಿಸಿತ್ತು.

ಕಾರ್ಖಾನೆಯ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಕಲುಷಿತ ಗಾಳಿಯಿಂದ ಅಸ್ತಮಾ ರೋಗಿಗಳ ಸಂಖ್ಯೆ ಶೇ 17ರಷ್ಟು ಹೆಚ್ಚಾಗಿದ್ದರೆ, ಉಸಿರಾಟದ ಸೋಂಕಿನ ಸಮಸ್ಯೆ ಹೊಂದಿರುವವರ ಸಂಖ್ಯೆಯಲ್ಲಿ ಶೇ 171ರಷ್ಟು, ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಶೇ 293ರಷ್ಟು ಹೆಚ್ಚಳವಾಗಿದೆ. ಕಲುಷಿತ ನೀರಿನಿಂದ ಮೂತ್ರಪಿಂಡ ಸಮಸ್ಯೆ ಇರುವವರ ಸಂಖ್ಯೆಯಲ್ಲಿ ಶೇ 55ರಷ್ಟು ಹೆಚ್ಚಳವಾಗಿದೆ. ಕ್ಯಾನ್ಸರ್ ಪೀಡಿತರ ಸಂಖ್ಯೆ ಶೇ 109 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ವರದಿಯಲ್ಲಿ ಕಾರ್ಖಾನೆಯ ಗಾಳಿ ಹಾಗೂ ನೀರು ಸೇವಿಸಿ ಯಾವುದೇ ಜಾನುವಾರು ಮೃತಪಟ್ಟಿಲ್ಲ, ಮಣ್ಣಿನ ಆರೋಗ್ಯಕ್ಕೆ ಹಾನಿಯಾಗಿಲ್ಲ, ರೈತರ ಬೆಳೆಗಳಿಗೆ ಗಂಭೀರ ಹಾನಿಯಾಗಿಲ್ಲ, ಗಾಳಿಯಲ್ಲಿ ವಿಷಕಾರಿ ಅಂಶಗಳಿಲ್ಲ, ಕೃಷಿ ಜಮೀನಿನಲ್ಲಿರುವ ತೆರೆದಬಾವಿಗಳಲ್ಲಿನ ನೀರು ಮಾತ್ರ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟಿಡಿಎಸ್‌, ಕ್ಲೋರೈಡ್‌ ಹಾಗೂ ಗಡಸುತನ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೂವರು ತಜ್ಞರ ಸಮಿತಿ

2019ರಲ್ಲಿ ₹ 4.89 ಕೋಟಿ ಪರಿಹಾರ ಪಾವತಿಗೆ ತಜ್ಞರ ಸಮಿತಿಯು ಯುಪಿಸಿಎಲ್‌ಗೆ ಸೂಚಿಸಿತ್ತು. ಈ ಆದೇಶದ ವಿರುದ್ಧ ನಂದಿಕೂರು ಜನಜಾಗೃತಿ ಸಮಿತಿ ಚೆನ್ನೈನ ಹಸಿರುಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಜನ–ಜಾನುವಾರು ಹಾಗೂ ಪರಿಸರ ಹಾನಿಯ ಬಗ್ಗೆ ಪರಿಶೀಲಿಸಿ ವರದಿ ನೀಡಲು ಡಾ.ಆರ್‌.ಶ್ರೀಕಾಂತ್‌, ಡಾ.ಕೃಷ್ಣ ರಾಜ್, ಜಿ.ತಿರುಮೂರ್ತಿ ಅವರನ್ನೊಳಗೊಂಡ ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ಪರಿಶೀಲನೆ ನಡೆಸಿ, ₹ 74.93 ಕೋಟಿ ಪರಿಹಾರ ವಸೂಲಿಗೆ ಎನ್‌ಜಿಟಿಗೆ ತಿಳಿಸಿದೆ.

‘ವಿರೋಧ ಲೆಕ್ಕಿಸದೇ ಅನುಮತಿ’

‘ಉಷ್ಣ ವಿದ್ಯುತ್ ಸ್ಥಾವರ ಪರಿಸರಕ್ಕೆ ಮಾರಕ ಎಂಬುವುದನ್ನು ಜನಜಾಗೃತಿ ಸಮಿತಿ ಆರಂಭದಲ್ಲೇ ತಿಳಿಸಿತ್ತು. ಜನರ ವಿರೋಧ ಲೆಕ್ಕಿಸದೆ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಪರಿಸರ ಮಾಲಿನ್ಯ ವಿಚಾರವಾಗಿ ಪಂಚಾಯಿತಿಯು ಕಂಪನಿಗೆ ಎಚ್ಚರಿಕೆ ನೋಟಿಸ್‌ ಕೂಡ ನೀಡಿದೆ. ಪರಿಸರ ಮಾಲಿನ್ಯ ಮುಂದುವರಿಸಿದರೆ ಮತ್ತೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಕುಮಾರ್ ತಿಳಿಸಿದ್ದಾರೆ.

ಜನಪ್ರತಿನಿಧಿಗಳ ಮೌನ

‘ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಎರ್ಮಾಳು, ಎಲ್ಲೂರು, ಮುದರಂಗಡಿ, ನಂದಿಕೂರು, ಪಾದೆಬೆಟ್ಟು, ಸಾಂತೂರು ಸುತ್ತಮುತ್ತ ಪರಿಸರ ಮಾಲಿನ್ಯ ಉಂಟಾಗಿದೆ’ ಎಂದು ಸ್ಥಳೀಯರಾದ ನಾಗೇಶ್ ಭಟ್ ದೂರಿದರು.

Leave a Reply

Your email address will not be published. Required fields are marked *

error: Content is protected !!