ನೈಟ್ ಕರ್ಫ್ಯೂ, ಧಾರ್ಮಿಕ ಆಚರಣೆಗೆ ತಡೆ- ಸರಕಾರದ ನಿಯಮ ವಿರೋಧಿಸಿದ ಶಾಸಕ ರಘುಪತಿ ಭಟ್
ಉಡುಪಿ ಎ.17(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ನ್ನು ನಿಯಂತ್ರಿಸುವ ಸಲುವಾಗಿ ನೈಟ್ ಕರ್ಫ್ಯೂ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ತಡೆ ಹಾಕಿರುವ ಸರಕಾರದ ನಿಯಮವನ್ನು ಉಡುಪಿ ಶಾಸಕ ರಘುಪತಿ ಭಟ್ ವಿರೋಧಿಸಿದ್ದಾರೆ.
ಈ ಬಗ್ಗೆ ಇಂದು ಶಾಸಕರ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹಾಗೂ ಹೆಚ್ಚು ಜನರು ಒಟ್ಟಿಗೆ ಸೇರದಿರುವ ಮೂಲಕ ಪರಿಹಾರ ಕಂಡುಕೊಳ್ಳಬಹುದೇ ಹೊರತು ರಾತ್ರಿ ಕರ್ಫ್ಯೂನಿಂದ ಕೊರೋನಾ ತಡೆಯಲು ಸಾಧ್ಯವಿಲ್ಲ ಎಂದರು.
ಉಡುಪಿ, ದ.ಕ ಜಿಲ್ಲೆಯ ದೈವ, ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯುತ್ತದೆ. ಇಲ್ಲಿನ ಅನೇಕ ಮಂದಿ ಧಾರ್ಮಿಕ ಕಾರ್ಯಕ್ರಮಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಿದರೆ ಕರಾವಳಿಯ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೆ ಆರ್ಥಿಕ ಸಂಕಷ್ಟದಿಂದ ಮಾನಸಿಕ ನೆಮ್ಮದಿಯೂ ಇಲ್ಲದಂತಾಗುತ್ತದೆ. ಕಳೆದ ವರ್ಷ ಕೊರೋನಾದಿಂದಾಗಿ ಯಾವುದೇ ಧಾರ್ಮಿಕ ಕಾರ್ಯಗಳು ನಡೆದಿಲ್ಲ, ಇದರಿಂದಾಗಿ ಅನೇಕರ ಬದುಕು ನಡೆಸುವುದು ಕಷ್ಟಕರವಾಗಿತ್ತು. ಇನ್ನೇನು ಧಾರ್ಮಿಕ ಕಾರ್ಯಕ್ರಮಗಳಿಂದ ಬದುಕು ಕಂಡುಕೊಳ್ಳುತ್ತಿರುವವರ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗ ಮತ್ತೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿದರೆ ಮತ್ತೆ ಅವರನ್ನು ಸಂಕಷ್ಟಕ್ಕೆ ನೂಕಿದಂತಾಗುತ್ತದೆ. ಅಲ್ಲದೆ ಈ ರೀತಿ ಮಾಡುವುದರಿಂದ ಕೋವಿಡ್ ಬಲಿಯಾಗುವವರ ಸಂಖ್ಯೆಗಿಂತ ಆರ್ಥಿಕ ಸಮಸ್ಯೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಬಹುದು ಎಂದರು.
ಸದ್ಯ ರಾಜಕೀಯ ಕಾರ್ಯಕ್ರಮಗಳಿಗೆ 100 ರಿಂದ 150 ಜನರು ಭಾಗವಹಿಸುತ್ತಾರೆ ಆದರೆ ರಾಜಕೀಯ ಕಾರ್ಯಕ್ರಮಗಳು ನಡೆಯಲೇಬೇಕೆಂಬ ಅನಿವಾರ್ಯತೆ ಇಲ್ಲ. ಅಗತ್ಯ ಸಂದರ್ಬದಲ್ಲಿ ರಾಜಕೀಯ ಕಾರ್ಯಕ್ರಮವನ್ನು ನಡೆಸದೆಯೂ ಇರಬಹುದು. ಆದರೆ ಕರಾವಳಿಗರ ಬದುಕು ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ನಡೆಯುವುದರಿಂದ ಇಲ್ಲಿನ ದೈವ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲೇ ಬೇಕಾಗುತ್ತದೆ. ಆದ್ದರಿಂದ ಸರಕಾರ 100 ಜನರ ಭಾಗವಹಿಸುವಿಕೆಗೆ ಸೀಮಿತ ಗೊಳಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ನಾನು ಇಲ್ಲೇ ಹುಟ್ಟಿ ಬೆಳೆದ್ದರಿಂದ ಒಬ್ಬ ಶಾಸಕನಾಗಿ ನಮ್ಮ ಕ್ಷೇತ್ರದ ಜನತೆ ಕೇಳಿಕೊಂಡಾಗ ಅವರ ಪರವಾಗಿ ನಿಲ್ಲಬೇಕಾಗುತ್ತದೆ ಎಂದ ಅವರು, ನಿರ್ಧಿಷ್ಟ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಿದರೆ ಉತ್ತಮವಾಗುತ್ತದೆ. ಅದರ ಬದಲು ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎನ್ನುವುದು ಸರಿಯಲ್ಲ. ಇದರಿಂದ ಆರ್ಥಿಕ ಸಂಕಷ್ಟ ಹೆಚ್ಚಾದಂತೆ ಸರಕಾರಕ್ಕೆ ಕೆಟ್ಟ ಹೆಸರು ಬರಬಹುದು ಎಂದು ಎಚ್ಚರಿಸಿದರು.
ಇನ್ನು ಜಿಲ್ಲೆಯಲ್ಲಿ ಎಂಐಟಿಯಲ್ಲಿ ಅಧಿಕ ಪ್ರಮಾಣದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳನ್ನು ಕಂಟೈನ್ಮೆಂಟ್ ಮಾಡುವ ಮೂಲಕ ನಿಯಂತ್ರಣಕ್ಕೆ ತಂದಿದ್ದೇವೆ. ಆದ್ದರಿಂದ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂವನ್ನು ತೆರವುಗೊಳಿಸುವಂತೆ ಹಾಗೂ ಸೀಮಿತ ಜನಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡುವಂತೆ ಮುಖ್ಯ ಮಂತ್ರಿ, ಆರೋಗ್ಯ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇವೆ. ಎಂದು ತಿಳಿಸಿದರು.
Im anti BJP Catholic. But I Support Sri Raghupathi Bhata Views completely. He works for the ppl of udupi with ture dedication. In fact I feel more than Shoba he deserves to be MP canditate of Udupi. The views expressed inthe above coloumn are well thot out
Super ❤️ sir