ಕೊಠಡಿಯಲ್ಲಿ ಹೆಣ, ಹಾಲ್’ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ…

ಬೆಂಗಳೂರು ಎ.17: ಒಂದೆಡೆ ಕೊರೋನಾ ರಾಜ್ಯಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ. ಮಿತಿ ಮೀರಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕೆ ಸರಕಾರ ಕಠಿಣ ಕ್ರಮಗಳನ್ನು ಜಾರಿ ಮಾಡಿದೆ. ಅದರೆ ಹಲವೆಡೆ ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ನಿರ್ಲಕ್ಷ್ಯ ಮಾಡಿ ಅನೇಕರು ಅಪಾಯ ಎದುರಿಸುತ್ತಿದ್ದಾರೆ. ಇಂತಹ ಹಲವು ಘಟನೆಗಳು ನಡೆದಿದ್ದು ಅಂತಹದ್ದೇ ಒಂದು ಸನ್ನಿವೇಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ‘ಫೇಸ್‍ಬುಕ್’ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಘಟನೆ ಬಗ್ಗೆ ಸಚಿವರಿಗೆ ಅವರ ಮಿತ್ರರೊಬ್ಬರು ತಿಳಿಸಿದ್ದರು. ಈ ಬಗ್ಗೆ ತಮ್ಮ ಫೇಸ್ ಬುಕ್‍ನಲ್ಲಿ ಮಾಹಿತಿ ಹಂಚಿಕೊಂಡ ಸಚಿವರು, ಕನಕಪುರ ರಸ್ತೆಯ ತಲಘಟ್ಟಪುರ ಹತ್ತಿರದ ಒಂದು ಹಳ್ಳಿಯಲ್ಲಿ  ಗಂಡ ಹೆಂಡತಿ ವಾಸವಾಗಿದ್ದರು. ಅದರಲ್ಲಿ ಗಂಡನಿಗೆ ಕೋವಿಡ್ ಬಂದು ತೀರಿ ಹೋಗಿದ್ದಾರೆ. ಅಂತ್ಯಸಂಸ್ಕಾರ ಮಾಡಲು ಯಾರು ಇಲ್ಲ. ಈ ಮಾಹಿತಿಯನ್ನು ನನ್ನ ಪತ್ರಕರ್ತ ಗೆಳೆಯರೊಬ್ಬರು ನನಗೆ ತಿಳಿಸಿದರು. ತಕ್ಷಣವೇ ರಾಜಾಜಿನಗರದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ನೆರವು ನೀಡಲು ತಿಳಿಸಿದೆ.

ನಮ್ಮ ಕಾರ್ಯಕರ್ತರು ವಿಚಾರಿಸಿದಾಗ ಆ ವ್ಯಕ್ತಿಗೆ ಜ್ವರ ಬಂದ ಕಾರಣ ಸ್ಥಳೀಯ ಆಸ್ಪತ್ರೆಗೆ ಕಳೆದ ವಾರ ಹೋಗಿ ಪರೀಕ್ಷೆ ಮಾಡಿಸಿರುವ ವಿಚಾರ ತಿಳಿದುಬಂದಿದೆ. ಅಲ್ಲಿ ಅವರಿಗೆ ಕೋವಿಡ್ ಪಾಸಿವಿಟ್ ಎಂದು ತಿಳಿಯುತ್ತದೆ. ಅವರು ನೇರವಾಗಿ ಮನೆಗೆ ಬಂದು ಕೋಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗುತ್ತಾರೆ. ಮೊನ್ನೆ ಸಂಜೆ ಅವರ ಹೆಂಡತಿ ಕೋಣೆಗೆ ಹೋಗಿ ನೋಡಿದರೆ ಗಂಡ ಮರಣ ಹೊಂದಿರುವುದು ತಿಳಿಯುತ್ತದೆ. ಇದರಿಂದ ಹೆಂಡತಿಗೆ ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದೆ ದಿಗ್ಬ್ರಮೆಯಾಗಿದೆ. ನಂತರ ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ಮೈಸೂರಿನಲ್ಲಿರುವ ಗಂಡನ ಬಾಮೈದನಿಗೆ ಕರೆ ಮಾಡಿ ತಿಳಿಸುತ್ತಾರೆ. ಮೈಸೂರಿನಿಂದ ಕಾರಿನಲ್ಲಿ ಬಂದ ಅವರು, ಕೊರೋನಾ ಕಾರಣದಿಂದ ಮನೆಯ ಒಳಗೆ ಹೋಗದೆ ಹೊರಗಡೆ ಕಾರಿನಲ್ಲೇ ರಾತ್ರಿ ಪೂರ್ತಿ ಮಲಗುತ್ತಾರೆ. ಒಂದು ಕಡೆ ರೂಮ್‍ನಲ್ಲಿ ಹೆಣ, ಹಾಲ್‍ನಲ್ಲಿ ಹೆಂಡತಿ, ಹೊರಗಡೆ ಕಾರಿನಲ್ಲಿ ಬಾಮೈದ…. ಯಾರಿಗೂ ಮುಂದೆ ಏನು ಮಾಡಬೇಕೆಂದು ತಿಳಿದಿಲ್ಲ.

ಬಳಿಕ ನಿನ್ನೆ (ಏ.16) ನಮ್ಮ ರಾಜಾಜಿನಗರ ಕಾರ್ಯಕರ್ತರು ಸ್ಥಳೀಯ ಆರೋಗ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಕೆಂಗೇರಿಯ ಚಿತಗಾರದಲ್ಲಿ ಶವದ ಅಂತಿಮ ಕಾರ್ಯಕ್ಕೆ ವ್ಯವಸ್ಥೆ ಮಾಡಿ ಮುಗಿಸಿದರು. ಅಲ್ಲಿ ಶವದ ಪರವಾಗಿ ಅವರ ಒಬ್ಬ ಸಂಬಂಧಿ ಬಿಟ್ಟು ಯಾರು ಸಹ ಇರಲಿಲ್ಲ. ಅವರು ಶವದ ಹತ್ತಿರವಿರಲಿ, ಅದರ ವಾಹನ ಹತ್ತಿರ ಬರಲು ಹೆದರುತ್ತಿದ್ದರು. ಮೃತದೇಹದ ಪೂಜಾಕಾರ್ಯವನ್ನೂ ಮಾಡಲಿಲ್ಲ. ಕೊನೆಗೆ ನಮ್ಮ ಕಾರ್ಯಕರ್ತರೆ ಅಂತಿಮ ಸಂಸ್ಕಾರ ಮಾಡಿ ಬಂದರು. ಧೈರ್ಯದಿಂದ, ಒಳ್ಳೆ ಮನಸ್ಸಿನಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ ಆ ಕಾರ್ಯ ಮಾಡಿದ ನಮ್ಮ ಕಾರ್ಯಕರ್ತರಾದ ಗಿರೀಶ್, ಲಿಂಗರಾಜು, ಉಮೇಶ್ ಹಾಗೂ ಪ್ರವೀಣ್ ಅವರಿಗೆ ನನ್ನ ನಮನಗಳು ಎಂದು ಬರೆದು ಪೋಸ್ಟ್ ಮಾಡಿದ್ದರು. ಇದೀಗ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ  ಸಚಿವರ ಕಾಳಜಿಗೆ ಪ್ರಶಂಸೆಯೂ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!