ಸಾರ್ವಜನಿಕ ಸಮಾರಂಭಗಳಲ್ಲಿ ಸರ್ಕಾರದ ಆದೇಶ ಪಾಲನೆಯಾಗದಿದ್ದರೆ ಕಾನೂನು ಕ್ರಮ: ಉಡುಪಿ ಜಿಲ್ಲಾಧಿಕಾರಿ

ಉಡುಪಿ ಏ.17(ಉಡುಪಿ ಟೈಮ್ಸ್ ವರದಿ): ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು
ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಮಾರಂಭ ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು
ಗುಂಪು ಸೇರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಅಪಾಯವು ಹೆಚ್ಚಾಗಿರುತ್ತದೆ.

ರಾಜ್ಯ ಸರ್ಕಾರದ ಆದೇಶದಂತೆ ಸೋಂಕು ಹರಡುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ
ಸಾರ್ವಜನಿಕ ಸಮಾರಂಭ, ಆಚರಣೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಜನರ ಒಗ್ಗೂಡುವಿಕೆಗೆ ಈ
ಕೆಳಕಂಡ0ತೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ಸಾಮಾಜಿಕ ಆಚರಣೆಗಳು, ಸಮಾರಂಭಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿಯು 3.25 ಚ.ಮೀ.
ಮಾನದಂಡವನ್ನು ಪಾಲಿಸುವುದು ಕಡ್ಡಾಯವಾಗಿದೆ. ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿ ಮೀರದಂತೆ
ಹಾಗೂ ಕಲ್ಯಾಣ ಮಂಟಪ, ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಮಂದಿ
ಮೀರಬಾರದು.

ಜನ್ಮದಿನ ಹಾಗೂ ಇತರ ಆಚರಣೆಗಳಿಗೆ ಸಂಬ0ಧಿಸಿದ0ತೆ ತೆರೆದ ಪ್ರದೇಶದಲ್ಲಿ 50 ಮಂದಿ ಮೀರದಂತೆ ಹಾಗೂ
ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿ ಮೀರಬಾರದು. ನಿಧನ, ಶವಸಂಸ್ಕಾರದ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಮಂದಿ ಮೀರದಂತೆ ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಮಂದಿ ಮೀರಬಾರದು. ಅದೇ ರೀತಿ ಅಂತ್ಯಕ್ರಿಯೆ ಸಂದರ್ಭದಲ್ಲಿ 25 ಮಂದಿ ಮೀರಬಾರದು.

ಇತರೆ ಸಮಾರಂಭಗಳಿಗೆ ಸಂಬ0ಧಿಸಿದ0ತೆ 50 ಮಂದಿ ಮೀರದಂತೆ, ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾತ್ರ
ಅವಕಾಶ ಕಲ್ಪಿಸಬೇಕು. ಧಾರ್ಮಿಕ ಆಚರಣೆಗಳು ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ. ರಾಜಕೀಯ ಆಚರಣೆಗಳು
ಮತ್ತು ಸಮಾರಂಭಗಳನ್ನು ತೆರೆದ ಪ್ರದೇಶದಲ್ಲಿ ನಡೆಸಲು ಅನುಮತಿ ನೀಡಲಾಗಿದ್ದು, 200 ಮಂದಿ ಮೀರಬಾರದು
ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೇಲ್ಕಂಡ ಸಂದರ್ಭಗಳಲ್ಲಿ ಜನರು ಕಡ್ಡಾಯವಾಗಿ ಸರ್ಕಾರದ ಸಂಬ0ಧಪಟ್ಟ ಇಲಾಖೆಗಳು ಹೊರಡಿಸಿರುವ
ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣ ಮಂಟಪ, ಸಿನಿಮಾ ಮಂದಿರ,
ಹಾಲ್‌ಗಳು ಮತ್ತು ಆಚರಣೆಗಾಗಿ ಜನ ಸೇರುವ ಇತ್ಯಾದಿ ಪ್ರದೇಶಗಳ ಉಸ್ತುವಾರಿ ಹೊಂದಿರುವವರು ಕಡ್ಡಾಯವಾಗಿ
ಸ್ಯಾನಿಟೈಝೇಷನ್ ಕ್ರಮಗಳನ್ನು ಅನುಸರಿಸಬೇಕು.

ಈ ಮೇಲ್ಕಂಡ ಅಂಶಗಳನ್ನು ಪಾಲಿಸುವ ಷರತ್ತಿನ ಮೇರೆಗೆ ಕೋವಿಡ್ 19 ನಿಯಮಾವಳಿಗಳನ್ನು ಅನುಸರಿಸಿ ತಮ್ಮ
ವ್ಯಾಪ್ತಿಯಲ್ಲಿಯೇ ಸಮಾರಂಭಗಳು ಮತ್ತು ಆಚರಣೆಗಳಿಗೆ ಅನುಮತಿ ನೀಡುವ ಬಗ್ಗೆ ಆಯಾ ತಾಲೂಕಿನ
ತಹಶೀಲ್ದಾರರುಗಳು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆದೇಶ ಪಾಲನೆಯಲ್ಲಿ
ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ
ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ
ಜಿ. ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!