ವಲಸೆ ಕಾರ್ಮಿಕರು ಕಾಲ್ನೆಡಿಗೆಯಲ್ಲಿ ಊರುಗಳಿಗೆ ತೆರಳದಂತೆ ನೋಡಿಕೊಳ್ಳಿ: ಕೇಂದ್ರ ಸೂಚನೆ

ನವದೆಹಲಿ: ದೇಶದ ವಿವಿಧ ಭಾಗಗಳಿಂದ ಕಾಲ್ನೆಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟ ಪರಿಸ್ಥಿತಿಯನ್ನು ಪರಿಹರಿಸುವ ಕ್ರಮವಾಗಿ ಸಮನ್ವಯದ ಮೂಲಕ ಸಹಕರಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. 

ಕಾರ್ಮಿಕರಿಗಾಗಿ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ರೈಲ್ವೆ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ವಲಸಿಗ ಕಾರ್ಮಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
  
ವಲಸೆ ಕಾರ್ಮಿಕರನ್ನು ಅವರ ಸ್ವಂತ ರಾಜ್ಯ, ಊರುಗಳಿಗೆ ತಲುಪಿಸಲು ಇನ್ನೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರಗಳು ರೈಲ್ವೆ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಬೇಕು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿಮಾಡಿದ್ದಾರೆ. 

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಮಾರ್ಗಗಳಲ್ಲಿ ವಿಶ್ರಾಂತಿ ಸ್ಥಳಗಳನ್ನು ವ್ಯವಸ್ಥೆಗೊಳಿಸಬೇಕು. ಈ ಸ್ಥಳಗಳನ್ನು ಜಿಲ್ಲಾಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಾಯದೊಂದಿಗೆ ಗುರುತಿಸಿ ಅಭಿವೃದ್ದಿಪಡಿಸಿಬೇಕು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ ವಿಶ್ರಾಂತಿ ಸ್ಥಳಗಳಲ್ಲಿ ಸೂಕ್ತ ಆಹಾರ, ಆರೋಗ್ಯವ್ಯವಸ್ಥೆ ಹಾಗೂ ನೈರ್ಮಲೀಕರಣ ವ್ಯವಸ್ಥೆಗಳನ್ನು ಸ್ಥಾಪಿಸಬೇಕು ಎಂದು ಗೃಹ ಕಾರ್ಯದರ್ಶಿ ಸಲಹೆ ನೀಡಿದ್ದಾರೆ. 

ಯಾವುದೇ ವಲಸೆ ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಅಥವಾ ರಸ್ತೆಗಳಲ್ಲಿ ನಡೆದು ಹೋಗದಂತೆ ರಾಜ್ಯ ಹಾಗೂ ಜಿಲ್ಲಾಡಳಿತಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಖಾತರಿಪಡಿಸಬೇಕು ಎಂದು ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತಾಕೀತು ಮಾಡಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಜೀವನೋಪಾಯದ ಪ್ರಶ್ನೆ, ಕೋವಿಡ್-19 ಸೋಂಕಿನ ಭಯ ಇವುಗಳಿಂದಾಗಿ ವಲಸಿಗ ಕಾರ್ಮಿಕರು ಮನೆಗಳಿಗೆ ತೆರಳುತ್ತಿದ್ದಾರೆ. ವಲಸಿಗ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಈ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಜಯ್ ಭಲ್ಲಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!