ನೃತ್ಯನಿಕೇತನ ಕೊಡವೂರು: ಎ.18 ರಂದು ಏಕವ್ಯಕ್ತಿ ನೃತ್ಯ ಪ್ರದರ್ಶನ
ಉಡುಪಿ,ಎ.16(ಉಡುಪಿ ಟೈಮ್ಸ್ ವರದಿ): ನೃತ್ಯನಿಕೇತನ ಕೊಡವೂರು ಸಂಯೋಜಿಸುತ್ತಿರುವ ಏಕವ್ಯಕ್ತಿ ನೃತ್ಯಪ್ರದರ್ಶನದ ನೃತ್ಯಸರಣಿ “ನೃತ್ಯಚಾವಡಿ”ಯ ಎರಡನೆಯ ಸರಣಿ ಕಾರ್ಯಕ್ರಮ ಎ.18 ರಂದು ಮಣಿಪಾಲದ ಮಣ್ಣಪಳ್ಳದ ಸಮೀಪದ ನಿರ್ಮಿತಿಕೇಂದ್ರದ ಸೋಪಾನ ವೇದಿಕೆಯಲ್ಲಿ ಸಂಜೆ 6-30ಕ್ಕೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿಜಯ ಕುಮಾರ್ ಮುದ್ರಾಡಿಯವರು ಭಾಗವಹಿಸಲಿದ್ದು, ನೃತ್ಯಕಾರ್ಯಕ್ರಮವನ್ನು ನೃತ್ಯನಿಕೇತನ ಕೊಡವೂರು ಇದರ ಹಿರಿಯ ಕಲಾವಿದೆ, ವಿದ್ಯಾರ್ಥಿನಿ, ನಾಟಕ, ಯಕ್ಷಗಾನ ಕಲಾವಿದೆ ವಿದುಷಿ ಅನಘಶ್ರೀ ಅವರು ನಡೆಸಿಕೊಡಲಿದ್ದಾರೆ.
ಡಾ. ವೀರಕುಮಾರ ಮತ್ತು ಡಾ. ಉಷಾ ಪಾರ್ವತಿ ದಂಪತಿಗಳ ಪುತ್ರಿಯಾದ ಅನಘಶ್ರೀ ಅವರು ನೃತ್ಯನಿಕೇತನ ಕೊಡವೂರು ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿ ಕಳೆದ 18 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. 2017ರ ವಿದ್ವತ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯರಾಗಿದ್ದಾರೆ. ಅಲ್ಲದೆ ಮಾರ್ಪಳ್ಳಿ ಯಕ್ಷಗಾನ ಮಂಡಳಿಯಲ್ಲಿ ಕಳೆದ 10 ವರ್ಷಗಳಿಂದ ಯಕ್ಷಗಾನ ಅಭ್ಯಾಸವನ್ನು ನಡೆಸುತ್ತಿದ್ದಾರೆ.
ಮಣಿಪಾಲದ ಎಂಐಟಿಯಲ್ಲಿ ಎಂಟೆಕ್ ವ್ಯಾಸಂಗವನ್ನು ನಡೆಸುತ್ತಿದ್ದು ವಿಎಮ್ ವೇರ್ನಲ್ಲಿ ಉದ್ಯೋಗಿಯಾಗಿದ್ದಾರೆ. ದೂರದರ್ಶನದ ‘ಬಿ’ ಶ್ರೇಣಿಯ ಕಲಾವಿದೆಯಾಗಿದ್ದು, ಭರತನಾಟ್ಯಕ್ಕೆ ಕನ್ನಡ ಸಂಸ್ಕøತಿ ಇಲಾಖೆಯ ಶಿಷ್ಯವೇತನವನ್ನು ಪಡೆದಿದ್ದಾರೆ. ನೃತ್ಯನಿಕೇತನ ಕೊಡವೂರಿನ ನೃತ್ಯಗಾಥಾ, ನಾರಸಿಂಹ, ಚಿತ್ರಾ, ಶ್ರೀನಿವಾಸ ಕಲ್ಯಾಣ, ಶಬರಿ ಮುಂತಾದ ನೃತ್ಯರೂಪಕ, ನೃತ್ಯನಾಟಕಗಳಲ್ಲಿ ಅಭಿನಯಿಸಿ ಸಂಸ್ಥೆಯ ಭಾಗವಾಗಿ ದೇಶದಾದ್ಯಂತ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪುಷ್ಪರಾಣಿ, ಮಹಿಳಾಭಾರತ, ಚೋಮನದುಡಿ, ಗಂಗಿ ಪರಸಂಗ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ರೋಣದ ಚಿದಂಬರೇಶ್ವರ ದೇವಸ್ಥಾನದಿಂದ ನೃತ್ಯಕಲಾಶಿರೋಮಣಿ, ಮಾರ್ಪಳ್ಳಿ ಯಕ್ಷಗಾನ ಮಂಡಳಿಯಿಂದ ಅಭಿನಯ ಶಾರದೆ ಎಂಬ ಬಿರುದನ್ನು ಪಡೆದಿದ್ದಾರೆ.