ಉಡುಪಿ,ಮಣಿಪಾಲ ಸಹಿತ 8 ನಗರಗಳ ನೈಟ್ ಕರ್ಫ್ಯೂ ಮುಂದುವರಿಯಲಿದೆ: ಸಿಎಂ

ಬೆಂಗಳೂರು: ಏಪ್ರಿಲ್ 20ರಂದು ಕೊರೋನಾ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕಠಿಣ ನಿರ್ಬಂಧ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಅವರ ನಿವಾಸ ಕಾವೇರಿಯಲ್ಲಿ ಬೆಳಗ್ಗೆ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಸಮ್ಮುಖದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, 8 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ, ಅದು ಏಪ್ರಿಲ್ 20ರವರೆಗೆ ಮುಂದುವರಿಯಲಿದೆ, ಮುಂದೆ ಏನು ಮಾಡಬೇಕೆಂಬ ಬಗ್ಗೆ 20ರಂದು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಕೊರೋನಾ ಮಹಾಮಾರಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ, ಈಗ ತಜ್ಞರು ನೀಡಿರುವ ಅಭಿಪ್ರಾಯ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ತಜ್ಞರ ಅಭಿಪ್ರಾಯ, ವರದಿಗಳ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ನೈಟ್ ಕರ್ಫ್ಯೂವನ್ನು ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಬೇಕಾ ಎಂಬುದನ್ನು ನಿರ್ಧರಿಸಲಿದ್ದೇವೆ ಎಂದರು.

ದೆಹಲಿ, ಮಹಾರಾಷ್ಟ್ರಕ್ಕೆ ಹೋಲಿಸಬೇಡಿ: ನಮ್ಮ ಕರ್ನಾಟಕ ರಾಜ್ಯವನ್ನು ದೆಹಲಿ, ಮಹಾರಾಷ್ಟ್ರ ಅಥವಾ ಬೇರೆ ರಾಜ್ಯಗಳಿಗೆ ಹೋಲಿಸಬೇಡಿ, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಜಾರಿಗೆ ತರುತ್ತೇವೆ, ಮುಂದಿನ ದಿನಗಳಲ್ಲಿ ಪ್ರಧಾನಿಯವರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು

Leave a Reply

Your email address will not be published. Required fields are marked *

error: Content is protected !!