ಭಾರತದಲ್ಲಿ ‘ಸಿಟಿಬ್ಯಾಂಕ್‌’ ಸೇವೆ ಸ್ಥಗಿತಗೊಳಿಸಲು ನಿರ್ಧಾರ!

ಮುಂಬೈ: ಅಮೆರಿಕದ ಬ್ಯಾಂಕಿಂಗ್ ಕಂಪನಿಯಾದ ‘ಸಿಟಿಬ್ಯಾಂಕ್‌’ ಭಾರತದಲ್ಲಿ ಗ್ರಾಹಕ ಬ್ಯಾಂಕಿಂಗ್‌ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಗುರುವಾರ ಪ್ರಕಟಿಸಿದೆ. ಸಿಟಿ ಬ್ಯಾಂಕ್‌ ಭಾರತದಲ್ಲಿ ಕ್ರೆಡಿಟ್ ಕಾರ್ಡ್‌, ಗೃಹ ಸಾಲ, ಸಂಪತ್ತು ನಿರ್ವಹಣೆ ಸೇವೆಗಳನ್ನು ನೀಡುತ್ತಿದೆ.

ದೇಶದಲ್ಲಿ ಸಿಟಿ ಬ್ಯಾಂಕ್‌ ಒಟ್ಟು 35 ಶಾಖೆಗಳನ್ನು ಹೊಂದಿದೆ. ಸರಿಸುಮಾರು ನಾಲ್ಕು ಸಾವಿರ ನೌಕರರು ಸಂಸ್ಥೆಯ ಗ್ರಾಹಕ ಬ್ಯಾಂಕಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಒಟ್ಟು 13 ದೇಶಗಳಲ್ಲಿ ಸ್ಥಗಿತಗೊಳಿಸುವ ತೀರ್ಮಾನವನ್ನು ಸಿಟಿಬ್ಯಾಂಕ್ ಕಂಪನಿ ಗುರುವಾರ ಪ್ರಕಟಿಸಿತು. ‘ಈ ದೇಶಗಳಲ್ಲಿ ನಾವು ಇತರರಿಗೆ ಸ್ಪರ್ಧೆ ನೀಡಲು ಅಗತ್ಯವಿರುವಷ್ಟು ಬೃಹತ್ ಆಗಿ ಬೆಳೆದಿಲ್ಲ’ ಎಂಬ ಕಾರಣಕ್ಕೆ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಸಿಟಿಬ್ಯಾಂಕ್‌ನ ಜಾಗತಿಕ ವಹಿವಾಟುಗಳ ಸಿಇಒ ಜೇನ್ ಫ್ರೇಸರ್ ಹೇಳಿದ್ದಾರೆ.

ಸಿಟಿಬ್ಯಾಂಕ್‌ ತನ್ನ ಸೇವೆಗಳನ್ನು ಸ್ಥಗಿತಗೊಳಿಸಲು ಕಾನೂನು ಜಾರಿ ಸಂಸ್ಥೆಗಳ ಅನುಮೋದನೆ ಅಗತ್ಯ. ‘ನಮ್ಮ ಚಟುವಟಿಕೆಗಳಲ್ಲಿ ತಕ್ಷಣಕ್ಕೆ ಯಾವುದೇ ಬದಲಾವಣೆ ಇಲ್ಲ. ಈಗ ಮಾಡಿರುವ ಘೋಷಣೆಯಿಂದಾಗಿ ಉದ್ಯೋಗಿಗಳ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನಾವು ಸದ್ಯಕ್ಕೆ ನಮ್ಮ ಗ್ರಾಹಕರಿಗೆ ಸೇವೆ ಒದಗಿಸುವುದನ್ನು ಮುಂದುವರಿಸುತ್ತೇವೆ’ ಎಂದು ಸಿಟಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಶು ಖುಲ್ಲರ್ ಹೇಳಿದ್ದಾರೆ.

ಸಿಟಿ ಬ್ಯಾಂಕ್ 1985ರಿಂದ ಭಾರತದಲ್ಲಿ ಗ್ರಾಹಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಗುರುಗ್ರಾಮದಲ್ಲಿ ಇರುವ ತನ್ನ ಕೇಂದ್ರಗಳಿಂದ ಜಾಗತಿಕ ವಾಣಿಜ್ಯ ವಹಿವಾಟುಗಳಿಗೆ ಬೆಂಬಲ ನೀಡುವ ಕೆಲಸವನ್ನು ಕಂಪನಿ ಮುಂದುವರಿಸಲಿದೆ. 

Leave a Reply

Your email address will not be published. Required fields are marked *

error: Content is protected !!