ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕು ಪ್ರಕರಣ- ಷೇರುಮಾರುಕಟ್ಟೆ ‘ಮಹಾ’ ಕುಸಿತ!
ಮುಂಬಯಿ ಏ.12: ಇತ್ತ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕು ಪ್ರಕರಣ ಅತ್ತ ಮುಂಬಯಿ ಷೇರುಮಾರುಕಟ್ಟೆ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. ಅದರಂತೆ ಇಂದು ಷೇರುಪೇಟೆಯ ಸಂವೇದಿ ಸೂಚ್ಯಂಕ 1,734ಕ್ಕೂ ಅಧಿಕ ಅಂಕಗಳ ಭಾರೀ ಕುಸಿತ ಕಂಡಿದೆ.
ಮುಂಬಯಿ ಷೇರುಪೇಟೆಯ ದಿನದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,734 ಅಂಕ ಕುಸಿತ ಕಂಡಿದ್ದು, 47,856 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ನಿಫ್ಟಿ ಸೂಚ್ಯಂಕ 524 ಅಂಕ ಕುಸಿತ ಕಂಡಿದ್ದು, 14,310ರ ಗಡಿ ತಲುಪಿದೆ.
ಇಂಡಸ್ ಇಂಡ್ ಬ್ಯಾಂಕ್, ಎಸ್ ಬಿಐ, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಅದಾನಿ ಪೋಟ್ರ್ಸ್, ಯುಪಿಎಲ್, ಬಜಾಜ್ ಆಟೋ, ಇಚರ್ ಮೋಟಾಸ್ರ್ಸ್, ಇಂಡಿಯನ್ ಆಯಿಲ್, ಕೋಟಕ್ ಮಹೀಂದ್ರ ಬ್ಯಾಂಕ್, ಹೀರೋ ಮೋಟೊ ಕಾರ್ಪೊರೇಷನ್, ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,68,912 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ ಆರು ದಿನಗಳಲ್ಲಿನ ಗರಿಷ್ಠ ಪ್ರಮಾಣವಾಗಿದೆ. ದೇಶದಲ್ಲಿ ಕೋವಿಡ್ ಸೋಂಕು 1.35 ಕೋಟಿಗೆ ಏರಿಕೆಯಾಗಿದೆ. ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ 1,70,179ಕ್ಕೆ ಹೆಚ್ಚಳವಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 63,294 ಕೋವಿಡ್ ಪಾಸಿಟಿವ್ ಸೋಂಕು ಪತ್ತೆಯಾಗಿರುವ ವರದಿಯಾಗಿದ್ದು, 349 ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂದ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.