ಮುಂಬೈ: ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್, ಔಷಧದ ಕೊರತೆ!

ಪಾಲ್ಘರ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಮುಂಬೈನ ಹಲವು ಪ್ರದೇಶಗಳ ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಿಲಿಂಡರ್‍ಗಳ ಕೊರತೆ ಕಾಡುತ್ತಿದೆ. ವಸಾಯಿ, ವಿರಾರ್, ನಲಸೋಪರಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪಾಲ್ಘರ್ ಜಿಲ್ಲೆಯ ಹೆಚ್ಚಿನ ಪ್ರದೇಶಗಳ ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಿಲಿಂಡರ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಇದೀಗ ಈ ಬಾಗದಲ್ಲಿ ಆಮ್ಲಜನಕದ ಸಿಲಿಂಡರ್ ಗಳ ಕೊರತೆ ಅನೇಕ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ. ಅಲ್ಲದೆ ಈ ಪ್ರದೇಶದ ಹೆಚ್ಚಿನ ಆಸ್ಪತ್ರೆಗಳು ರೆಮ್ ಡಿಸಿವಿರ್ ಔಷಧ ಕೊರತೆಯನ್ನು ಎದುರಿಸುತ್ತಿದ್ದು, ರೋಗಿಗಳ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ದುಪ್ಪಟ್ಟು ಬೆಲೆ ನೀಡುವಂತಾಗಿದೆ.

ವಸಾಯಿ ವಿರಾರ್ ನಗರ ಮಹಾನಗರ ಪಾಲಿಕೆಯು ಮಾಹಿತಿಯ ಪ್ರಕಾರ ಈ ಪ್ರದೇಶದಲ್ಲಿ  ಪ್ರತೀದಿನ ಸರಾಸರಿ 500 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಸ್ಥಳಿಯಾಡಳಿತ ನಡೆಸಲ್ಪಡುವ ಕೋವಿಡ್ ಆಸ್ಪತ್ರೆಗಳು ಮತ್ತು ವಿವಿಧ ಸೌಲಭ್ಯಗಳಲ್ಲಿ ಖಾಸಗಿ ಹಾಸಿಗೆಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡಿವೆ ಎಂದು ವಸಾಯಿ- ವಿರಾರ್ ಸಿಟಿ ಮುನ್ಸಿಪಾಲ್ ಕಾರ್ಪೊರೇಷನ್‍ನ ಪಿಆರ್‍ಒ ಪ್ರೊ.ಗಣೇಶ್ ಪಾಟೀಲ್ ಹೇಳಿದ್ದಾರೆ. ಇದರೊಂದಿಗೆ ಇನ್ನು ವಸಾಯಿ, ವಿರಾರ್ ಮತ್ತು ನಲಸೊಪರ ಪ್ರದೇಶಗಳಲ್ಲಿ ಎರಡು ನಾಗರಿಕ ಆಸ್ಪತ್ರೆಗಳಿವೆ. ವಿರಾರ್ ಪೂರ್ವದ ಚಂದನ್ಸಾರ್‍ನಲ್ಲಿ ಒಂದು 150 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯಿದೆ. ಇದರಲ್ಲಿ 50 ಆಮ್ಲಜನಕ ಹಾಸಿಗೆಗಳಿದ್ದು, ಇವೆಲ್ಲವೂ ಈಗಾಗಲೇ ಕೋವಿಡ್ ರೋಗಿ ಗಳಿಂದ ಭರ್ತಿಯಾಗಿವೆ. ವಸಾಯಿಯ ಸಿಟಿಯಲ್ಲಿರುವ ಇನ್ನೊಂದು ಆಸ್ಪತ್ರೆಯಲ್ಲಿ 45 ಹಾಸಿಗೆಗಳನ್ನು ಸೇರಿಸಲಾಗಿದೆ. ಇದರಲ್ಲಿ 45 ಐಸಿಯುಗಳಿದ್ದು, ಸಂಪೂರ್ಣ ರೋಗಿಗಳಿಂದ ಭರ್ತಿಯಾಗಿದೆ. ಅಲ್ಲದೆ ಎರಡು ಕ್ವಾರಂಟೈನ್ ಸೌಲಭ್ಯಗಳಿದ್ದು, 1,050 ಹಾಸಿಗೆಗಳನ್ನು ಹೊಂದಿರುವ ವರುಣ್ ಇಂಡಸ್ಟ್ರಿಯಲ್ಲಿ 100 ಆಮ್ಲಜನಕ ಹಾಸಿಗೆಗಳು ಭರ್ತಿಯಾಗಿವೆ. ವಿರಾರ್‍ನಲ್ಲಿ 300 ಹಾಸಿಗೆಗಳನ್ನು ಹೊಂದಿರುವ ಎಂಎಡಿಎ ಕ್ಯಾರಂಟೈನ್ ಸೆಂಟರ್ ಅನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತಾಗಿ ವಸಾಯಿಯ ಗೋಲ್ಡನ್ ಪಾರ್ಕ್ ಆಸ್ಪತ್ರೆಯ ಡಾ| ಮಾಲ್ಕಾಮ್ ಪೆಸ್ಟೊಂಜಿ ಅವರು ಮಾಹಿತಿ ನೀಡಿ. ಆಮ್ಲಜನಕ ಸಿಲಿಂಡರ್‍ಗಳ ಪೂರೈಕೆಯಲ್ಲಿ ತೀವ್ರ ಕೊರತೆಯಿದೆ ಎಂಬುದು ನಿಜ. ಇದರಿಂದಾಗಿ  ನಮ್ಮ ಆಸ್ಪತ್ರೆಯಲ್ಲಿ ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳನ್ನು ದಾಖಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೆಚ್ಚು ಆಮ್ಲಜನಕ ಅಗತ್ಯವಿರುವ ರೋಗಿಗಳಿಗೆ ನಾವು ಹೇಗೆ ಚಿಕಿತ್ಸೆ ನೀಡುವುದು ಎಂದು ಪ್ರಶ್ನಿಸಿದ್ದಾರೆ. ಮಾರುಕಟ್ಟೆಯಲ್ಲಿಯೂ ರೆಮ್ ಡಿಸಿವಿರ್ ಔಷಧದ ಕೊರತೆಯಿದೆ. ನಮಗೆ ಪ್ರತೀದಿನ ಕನಿಷ್ಠ ರೆಮ್ ಡಿಸಿವಿರ್ 40 ಬಾಟಲ್‍ಗಳು ಬೇಕಾಗುತ್ತವೆ. ಆದರೆ ನಮಗೆ ಪ್ರಸ್ತುತ 20 ಮಾತ್ರ ಸಿಗುತ್ತದೆ. ನನ್ನ ಆಸ್ಪತ್ರೆಯಲ್ಲಿ 50 ಹಾಸಿಗೆಗಳಿದ್ದು, ಅವೆಲ್ಲವೂ ಆಮ್ಲಜನಕ ಸೌಲಭ್ಯ ಹೊಂದಿವೆ. 50ರಲ್ಲಿ  ಎಂಟು ಐಸಿಯು ಹಾಸಿಗೆಗಳಿವೆ. ಕೋವಿಡ್ ಪೀಡಿತರಿಗೆ ಹೆಚ್ಚಿನವರಿಗೆ ಆಮ್ಲಜನಕದ ವ್ಯವಸ್ಥೆ ಮತ್ತು ರೆಮ್ ಡಿಸಿವಿರ್ ಬೇಕೇ ಬೇಕು ಎಂದು ಅವರು ಹೇಳಿದ್ದಾರೆ.

ಇನ್ನು ಆಮ್ಲಜನಕ ಸಿಲಿಂಡರ್‍ನ ಕೊರತೆಯ ಕುರಿತಾಗಿ ಮಾಹಿತಿ ನೀಡಿದ ಲಿಯೋ ಆಕ್ಸಿಜನ್ ವ್ಯಾಪಾರಿ ನಿತಿನ್ ಸೆರೆಜೋ ಅವರು, ಈ ಪ್ರದೇಶದ ಸುಮಾರು 75 ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್‍ಗಳನ್ನು ಪೂರೈಸಲಾಗುತ್ತಿದೆ. ಆದರೆ ಪ್ರಕರಣಗಳ ಉಲ್ಬಣದಿಂದಾಗಿ ಸಾಕಷ್ಟು ಸಂಖ್ಯೆಯ ಸಿಲಿಂಡರ್‍ಗಳನ್ನು ಒದಗಿ ಸಲು ಸಾಧ್ಯವಾಗಲಿಲ್ಲ. ಆಮ್ಲಜನಕ ಸಿಲಿಂಡರ್‍ಗಳಿಲ್ಲದೆ ಕೋವಿಡ್ ಪೀಡಿತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಸಾಮಾನ್ಯ ದಿನಗಳಲ್ಲಿ ಒಂದು ಆಸ್ಪತ್ರೆಗೆ ನಾಲ್ಕು ಸಿಲಿಂಡರ್‍ಗಳು ಬೇಕಾಗುತ್ತವೆ. ಆದರೆ ಹೆಚ್ಚಿನ ಆಸ್ಪತ್ರೆಗಳು ಈಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅವರಿಗೆ ಪ್ರತೀದಿನ ಕನಿಷ್ಠ 50 ಸಿಲಿಂಡರ್‍ಗಳು ಬೇಕಾಗುತ್ತವೆ. ಇದು ಖಾಲಿ ಸಿಲಿಂಡರ್‍ಗಳ ಕೊರತೆಗೆ ಕಾರಣವಾಗಿದೆ. ಉತ್ಪಾದನ ಘಟಕಗಳಿಂದ ಅವುಗಳನ್ನು ಪಡೆಯಲು ಕನಿಷ್ಠ 45 ದಿನಗಳಿಂದ ಎರಡು ತಿಂಗಳವರೆಗೆ ಕಾಯಬೇಕಾಗಿದೆ. ಸಿಲಿಂಡರ್‍ ಗಳ ಕೊರತೆಯಿಂದಾಗಿ ಆಸ್ಪತ್ರೆಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!