ಮಕ್ಕಳ ಸ್ನೇಹಿ ಜಿಲ್ಲೆಯಾಗುವತ್ತ ಉಡುಪಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆ ಕುರಿತು ಉತ್ತಮ ಕಾಳಜಿ ವಹಿಸಲಾಗುತ್ತಿದ್ದು, ಮಕ್ಕಳ ಸ್ನೇಹಿ ಜಿಲ್ಲೆಯಾಗುವತ್ತ ಉಡುಪಿ ಹೆಜ್ಜೆ ಇಡುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಆಯೋಗದ ಸದಸ್ಯ ಡಾ. ಆರ್ ಜಿ ಆನಂದ್ ಅವರು ಉಡುಪಿ ಜಿಲ್ಲೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಮಕ್ಕಳ ಅಯೋಗವು ಮಕ್ಕಳ ಹಕ್ಕುಗಳ ಕುರಿತಾಗಿ ಕಾರ್ಯನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಾಷ್ಟ್ರೀಯ ಆಯೋಗವು ಮಕ್ಕಳ ಹಕ್ಕುಗಳಿಗಾಗಿ ನಿಗದಿಪಡಿಸಿದ ಅವಶ್ಯಕತೆಯನ್ನು ತಲುಪುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲಾಡಳಿತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಉತ್ತಮ ಆರೋಗ್ಯ ಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಮಕ್ಕಳ ರಕ್ಷಣೆ ಕುರಿತಾಗಿ ಪರಿಣಾಮಕಾರಿಯಾಗಿ ಕಾನೂನು ರಚಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜಿಲ್ಲೆ ಮಕ್ಕಳ ಸ್ನೇಹಿ ಜಿಲ್ಲೆಯಾಗುವತ್ತ ಹೆಜ್ಜೆ ಇಡುತ್ತಿದೆ ಎಂದರು.  

ಉಡುಪಿಯಲ್ಲಿ 400 ಕ್ಕೂ ಹೆಚ್ಚು ಮಕ್ಕಳಿರುವ 28 ಚೈಲ್ಡ್ ಕೇರ್ ಸೆಂಟರ್‍ಗಳು ಇದ್ದು, ಜಿಲ್ಲಾಡಳಿತವು ಮಕ್ಕಳ ರಕ್ಷಣೆಯ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಕೋವಿಡ್, ಬಾಲ್ಯ ವಿವಾಹ ಇತ್ಯಾದಿ ಅನಾಹುತಗಳಿಂದ ಮಕ್ಕಳನ್ನು ರಕ್ಷಸುವಲ್ಲಿ ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಕಾರ್ಯಪ್ರವೃತ್ತವಾಗಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣೆ ಸಂಬಂಬಂಧಿಸಿ ಅದರಲ್ಲೂ ಹೆಣ್ಣು ಮಕ್ಕಳ ರಕ್ಷಣೆಗೆ ಸಂಬಂಧಿಸಿ  ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಷ್ಟ್ರೀಯ ಮಕ್ಕಳ ಆಯೋಗವು ಮಕ್ಕಳ ಆರೈಕೆ ಕೇಂದ್ರಗಳಿಗೆ ದಿಡೀರ್ ಭೇಟಿ ನೀಡಿ, ಅಲ್ಲಿನ ವಾಸ್ತಾವತೆ ಬಗ್ಗೆ ಪರಿಶೀಲನೆ ನಡೆಸುತ್ತದೆ. ಬಳಿಕ ಅಲ್ಲಿ ಮಕ್ಕಳ ಆರೈಕೆ, ಸುರಕ್ಷತೆ ಕುರಿತಾಗಿ ಜಿಲ್ಲಾಡಳಿತ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ಈ ವೇಳೆ ಅಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಯಾವುದೇ ಲೋಪದೋಷಗಳು ಕಂಡುಬಂದರೆ,  ಆಯೋಗವು ನಿರ್ದೇಶಕರಿಗೆ ಪತ್ರ ಬರೆದು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುತ್ತದೆ ಎಂದರು.

”ರಾಷ್ಟ್ರಮಟ್ಟದಲ್ಲಿ ಕೊರೊನಾ ಸೋಂಕಿತ ಮತ್ತು ಪೀಡಿತ ಮಕ್ಕಳಿಗೆ ಟೋಲ್ ಸಂಖ್ಯೆ ಇದ್ದು, ಸೋಂಕಿತ ಮಕ್ಕಳು ಸೋಮವಾರದಿಂದ ಶುಕ್ರವಾರದವರೆಗೆ 1800-121-2830ಕ್ಕೆ ಕರೆ ಮಾಡಬಹುದಾಗಿದೆ. ಇಲ್ಲಿ ಮಕ್ಕಳಿಗೆ ಸಮಾಲೋಚನೆ ನೀಡಲಾಗುವುದು. ಇದು ಮೂರು ಭಾಷೆಯಲ್ಲಿ ನಡೆಯುತ್ತಿದ್ದು, ಈಗ ನಾವು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ಅಲ್ಲದೆ ಜಿಲ್ಲೆಯಲ್ಲಿ 34 ಪೊಲೀಸ್ ಠಾಣೆಗಳಿದ್ದು, ಎಲ್ಲಾ ಪೊಲೀಸ್ ಠಾಣೆಯೂ ಮಕ್ಕಳ ಸ್ನೇಹಿ ಪೊಲೀಸರನ್ನು ಒಳಗೊಂಡಿದೆ. ಉಡುಪಿಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ಪರಿವರ್ತಿಸುವುದೇ ನಮ್ಮ ದ್ಯೇಯವಾಗಿದೆ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ನಡೆಸಲು ತೊಂದರೆಯಾಗುತ್ತಿರುವ ಹಿನ್ನೆಲೆ ಟೆಲಿ-ಕೌನ್ಸೆಲಿಂಗ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 2000ರಿಂದ 3000 ವರೆಗೆ ಕರೆಗಳು ಬರುತ್ತಿದ್ದು ಅವರುಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎನ್‍ಸಿಬಿಯ ಸಹಯೋಗದೊಂದಿಗೆ ಮಕ್ಕಳನ್ನು ಡ್ರಗ್ಸ್ ನಿಂದ ದೂರವಿಡುವ ಸಲುವಾಗಿ ಹಾಗೂ ಡ್ರಗ್ಸ್ ನಿರ್ಮೂಲನೆ ಮಾಡುವ ಕಾರ್ಯಕ್ರಮಗಳೂ ನಡೆಯುತ್ತಿದೆ ಎಂದರು. ಈ ಸಂದರ್ಬ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!