ಹತ್ರಾಸ್ ಪ್ರಕರಣ: 8 ಪಿಎಫ್‌ಐ ಸದಸ್ಯರ ವಿರುದ್ಧ ಚಾರ್ಜ್‌ಶೀಟ್, ಗಲಭೆ ಪ್ರಚೋದಿಸಲು ಆರೋಪಿಗಳಿಗೆ ವಿದೇಶದಿಂದ ಹಣ?‌

ಲಕ್ನೋ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ಪತ್ರಕರ್ತರನ್ನೂ ಒಳಗೊಂಡಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಎಂಟು ಸದಸ್ಯರ ವಿರುದ್ಧ ಮಥುರಾ ನ್ಯಾಯಾಲಯದ ಮುಂದೆ ಚಾರ್ಜ್‌ಶೀಟ್ ಸಲ್ಲಿಸಿದೆ. 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು 2020 ರ ಸೆಪ್ಟೆಂಬರ್‌ನಲ್ಲಿ ಆಕೆ ಸಾವನ್ನಪ್ಪಿದ್ದಳು. ಈ ವಿಚಾರ ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಈ ವಿಚಾರದಲ್ಲಿ ಶನಿವಾರ ಉತ್ತರಪ್ರದೇಶ ಎಸ್‌ಟಿಎಫ್‌ ಸಲ್ಲಿಸಿದ 5,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಹತ್ರಾಸ್‌ನಲ್ಲಿ ಜಾತಿ ಗಲಭೆಗಳನ್ನು ಪ್ರಚೋದಿಸಲು ಆರೋಪಿಗಳು ವಿದೇಶದಿಂದ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಿದೆ.

ಚಾರ್ಜ್‌ಶೀಟ್ ಸ್ವೀಕರಿಸಿದ ನ್ಯಾಯಾಲಯವು ಮೇ 1 ರಂದು ಮುಂದಿನ ವಿಚಾರಣೆಯ ದಿನಾಂಕವಾಗಿ ನಿಗದಿಪಡಿಸಿದೆ.5,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಅತೀಕ್-ಉರ್-ರಹಮಾನ್, ಪತ್ರಕರ್ತ ಸಿದ್ದೀಕ್ ಕಪ್ಪನ್, ಮಸೂದ್ ಅಹ್ಮದ್, ಆಲಂ, ಅನ್ಷಾದ್ ಬದ್ರುದ್ದೀನ್, ಫಿರೋಜ್ ಖಾನ್, ಡ್ಯಾನಿಶ್ ಮತ್ತು ರೌಫ್ ಷರೀಫ್ ಎಂದು ಗುರುತಿಸಲಾದ ಪಿಎಫ್‌ಐ ಸದಸ್ಯರ ವಿರುದ್ದ ಜಾತಿ ಗಲಭೆ ಸೃಷ್ಟಿಗಾಗಿ ಮಸ್ಕತ್ ಮತ್ತು ದೋಹಾದ ಹಣಕಾಸು ಸಂಸ್ಥೆಗಳಿಂದ 80 ಲಕ್ಷ ರೂ. ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.ಅತೀಕ್-ಉರ್-ರಹಮಾನ್, ಸಿದ್ದೀಕ್ ಕಪ್ಪನ್, ಮಸೂದ್ ಅಹ್ಮದ್ ಮತ್ತು ಆಲಂ ಅವರನ್ನು 2020 ರ ಅಕ್ಟೋಬರ್ 5 ರಂದು ಮಥುರಾದಲ್ಲಿ ಎಸ್‌ಟಿಎಫ್ ಬಂಧಿಸಿತ್ತು. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್‌ ಅವರನ್ನು ಡಿಸೆಂಬರ್‌ನಲ್ಲಿ ಬಂಧಿಸಲಾಯಿತು.

ಅನ್ಷಾದ್ ಬದ್ರುದ್ದೀನ್ ಮತ್ತು ಫಿರೋಜ್ ಖಾನ್‌ನನ್ನು ಫೆಬ್ರವರಿ 15 ರಂದು ಲಕ್ನೋದಿಂದ ಎಸ್‌ಟಿಎಫ್‌ ಬಂಧಿಸಿದ್ದು 2020 ರ ಗಲಭೆಯಲ್ಲಿ ಡ್ಯಾನಿಶ್ ಅವರ ಪಾತ್ರವಿದೆ ಎಂದು ಆರೋಪಿಸಿ ಆತನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.”ಮೇಲೆ ಹೆಸರಿಸಲಾದ ಎಲ್ಲಾ ಪಿಎಫ್‌ಐ ಸದಸ್ಯರ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ, ಗಲಭೆಗೆ ಕಾರಣವಾಗುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು, ಯಾವುದೇ ಗುಂಪಿನ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ವಿದೇಶದಿಂದ ಹಣ ಸಂಗ್ರಹಿಸಿದ ಹಿನ್ನೆಲೆ ಭಯೋತ್ಪಾದಕ ಕೃತ್ಯಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಟಿಎಫ್ ಅಧಿಕಾರಿಯೊಬ್ಬರು ಹೇಳಿದರು.ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು ಪರಿಶೀಲನೆಯಲ್ಲಿ ಹತ್ರಾಸ್‌ನಲ್ಲಿ ನಡೆದ ಅಪರಾಧ ಘಟನೆಗಳನ್ನು ಹದಗೆಡಿಸುವ ಮೂಲಕ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೆ ಪ್ರಯತ್ನಿಸಿದ್ದು ತಿಳಿದು ಬಂದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ದೆಹಲಿಯ ಪಿಎಫ್‌ಐ ಕಚೇರಿಯಲ್ಲಿ ಶೋಧದ ವೇಳೆ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಸಾಕ್ಷ್ಯಗಳು ದೊರೆತಿವೆ ಎಂದೂ ಉಲ್ಲೇಖಿಸಲಾಗಿದೆ.ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಚಾರ್ಜ್‌ಶೀಟ್ ಸಲ್ಲಿಸಿರುವ ಬಗ್ಗೆ ದೃಢಪಡಿಸಿದ್ದು ಆದರೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಬ್ಯಾಂಕ್ ಆಫ್ ಮಸ್ಕತ್‌ನಿಂದ 30 ಲಕ್ಷ ರೂ. ಮತ್ತು ಬ್ಯಾಂಕ್ ಆಫ್ ದೋಹಾದಿಂದ 50 ಲಕ್ಷ ರೂ.ಗಳನ್ನು ಆರೋಪಿ ರವೂಫ್ ಶರೀಫ್‌ ಅವರ ಖಾತೆಗಳಿಗೆ ವರ್ಗಾಯಿಸಲಾಗಿದ್ದು, ಹತ್ರಾಸ್ ಘಟನೆಯ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಗೆ ಈ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್ ಮೂಲಗಳು ತಿಳಿಸಿವೆ. ಅಂತೆಯೇ, ಸಿದ್ದೀಕ್ ಕಪ್ಪನ್, ಅತೀಕ್-ಉರ್-ರೆಹಮಾನ್‌ನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದ. ಮೊಹಮ್ಮದ್ ಆಲಂ ಈ ಪಿತೂರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!