ಸಾರ್ವಜನಿಕರು ಭಯಪಡದೆ ಕೊರೋನಾ ಲಸಿಕೆ ಪಡೆದುಕೊಳ್ಳಿ: ಜಿಲ್ಲಾಧಿಕಾರಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯನ್ನು ಕೊರೋನಾದಿಂದ ಮುಕ್ತಗೊಳಿಸುವ ಸಲುವಾಗಿ ಸಾರ್ವಜನಿಕರು ಕೊರೋನಾ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಜಿಲೆಯಲ್ಲಿ ಕೋವಿಡ್ ತಡೆಗಟ್ಟುವ ಸಲುವಾಗಿ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು. ಶುಕ್ರವಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಿಸಲಾಗುತ್ತಿದ್ದು, ಈ ಲಸಿಕೆಯಿಂದ ಯಾವುದೇ ರೀತಿಯ ಅಪಾಯ ಉಂಟಾಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ಲಸಿಕೆ ಕುರಿತು ಯಾವುದೇ ಭಯಪಡದೆ ಪಡೆದುಕೊಳ್ಳುಬೇಕು. ಈ ಮೂಲಕ ಕೊರೋನಾವನ್ನು ಜಿಲ್ಲೆಯಿಂದ ಹೊಡೆದೋಡಿಸಲು ಸಹಕಾರ ನೀಡಿದಂತಗುತ್ತದೆ ಎಂದರು.
ಇನ್ನು ಕೋವಿಡ್ ಮಾರ್ಗಸೂಚಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಜಾತ್ರೆ, ಉತ್ಸವಗಳಿಗೆ ಯಾವುದೇ ರೀತಿ ಅನುಮತಿ ನೀಡುವುದಿಲ್ಲ. ಆದರೆ ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಯಾವುದೇ ತಡೆ ಇಲ್ಲ. ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಿ ಮಾಡುವ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಹಾಗೂ ನಿಯಮಗಳನ್ನು ಪಾಲಿಸದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಬರುವವರಿಗೆ ಯಾವುದೇ ನಿರ್ಭಂಧವಿಲ್ಲ ಆದರೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ. ಎಂಐಟಿ ಕ್ಯಾಂಪಸ್ನಲ್ಲಿ 1000 ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕ್ಯಾಂಪಸ್ ನ್ನು ಸೀಲ್ ಡೌನ್ ಮಾಡಲಾಗಿದೆ. ಇದರೊಂದಿಗೆ ಮಾಂಡವಿ ಅಪಾರ್ಟ್ಮೆಂಟ್ ನ್ನು ಕೂಡಾ ಸೀಲ್ ಡೌನ್ ಮಾಡಲಾಗಿದ್ದು, ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಪ್ರದೇಶಗಳನ್ನು ಅಲ್ಲಿಯೇ ಸೀಲ್ ಡೌನ್ ಮಾಡಿ ಕಂಟೈನ್ ಮಾಡುವ ಕೆಲಸ ನಡೆಯುತ್ತಿದೆ.
ಎಂಐಟಿ ಕ್ಯಾಂಪಸ್ನಿಂದ ಸೋಂಕು ಹೊರ ಹೋಗಬಾರದು ಎಂಬುದು ಜಿಲ್ಲೆಯ ಆಶಯವಾಗಿತ್ತು. ಆದ್ದರಿಂದ ಅಲ್ಲಿರುವ ಎಲ್ಲರನ್ನೂ ಟೆಸ್ಟ್ ಮಾಡಲಾಗುತ್ತಿದೆ. ಇದುವರೆಗೆ 10,000 ಮಂದಿಯನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಿದ್ದು, ಎಲ್ಲರನ್ನೂ ಗುಣ ಪಡಿಸಿ ಆರೋಗ್ಯಪೂರ್ಣವಾಗಿ ಹೊರ ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.