ಸ್ಟ್ಯಾಂಪ್ ನೀಡಲು ನಾನೇನು ಪೋಸ್ಟ್ ಮ್ಯಾನ್ ಅಲ್ಲ- ಸಚಿವ ಈಶ್ವರಪ್ಪ

ಬೆಂಗಳೂರು: ತಮ್ಮ ಸಂಬಂಧಿಯೇ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ‘ತುಂಡು ಗುತ್ತಿಗೆ’ ಆಧಾರದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನೇರವಾಗಿ ₹ 65 ಕೋಟಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶಿಸಿದ್ದೇ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಸಿಟ್ಟಿನ ಮೂಲ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮರಿಸ್ವಾಮಿ ಸಲ್ಲಿಸಿದ ಕೋರಿಕೆಯನ್ನು ಆಧರಿಸಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 65 ಕೋಟಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಆದೇಶಿಸಿದ್ದರು. ಈಶ್ವರಪ್ಪ ಬಾಕಿ ಇರಿಸಿದ್ದ ಕಡತವನ್ನು ತರಿಸಿಕೊಂಡು ಯಡಿಯೂರಪ್ಪ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿರುವುದು ಇಬ್ಬರ ನಡುವಿನ ಸಂಘರ್ಷಕ್ಕೆ ಮೂಲ ಕಾರಣ.

ಪ್ರತಿ ಇಲಾಖೆಗೆ ಸಚಿವರು ಇರುವುದು ಪೋಸ್ಟ್ ಮ್ಯಾನ್ ಕೆಲಸ ಮಾಡಲು ಅಲ್ಲದ ಎಂದು ಗುಡುಗಿದ ಅವರು, ಅವರಿಗೂ ಜವಾಬ್ದಾರಿ ಇರುತ್ತದೆ. ನೀವು ಹೇಳಿದವರಿಗೆ, ನೀವು ಹೇಳಿದಷ್ಟೇ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಅದನ್ನು ನನ್ನ ಗಮನಕ್ಕೆ ತನ್ನಿ, ನಿಯಮಾನುಸಾರ ಬಿಡುಗಡೆ ಮಾಡರು ಕ್ರಮವಹಿಸುತ್ತೇನೆ. ನಮ್ಮ ಇಲಾಖೆಗೆ ಬಂದ ಅನುದಾನ ನಮಗೆ ಗೊತ್ತಿಲ್ಲದೆ ಬಿಡುಗಡೆ ಆಗುವುದು ನಿಯಮಕ್ಕೆ ವಿರುದ್ಧವಾಗಿದೆ. ಈ ಪದ್ಧತೆ ಮುಂದುವರೆಯಬಾರು ಎಂಬ ಕಾರಣಕ್ಕೆ ಪತ್ರ ಬರೆಯುವ ತೀರ್ಮಾನಕ್ಕೆ ಬಂದಿದ್ದೆ ಎಂದಿದ್ದಾರೆ. ಈ ನಡುವೆ ಪಕ್ಷದೊಳಗಿನ ತಮ್ಮ ವಿರುದ್ಧ ಎದ್ದಿರುವ ಅಸಮಾಧಾನಕ್ಕೂ ತಿರುಗೇಟು ನೀಡಿರುವ ಅವರು, ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ

ನಿಯಮಗಳ ಪ್ರಕಾರ, ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯ ಒಪ್ಪಿಗೆ ಪಡೆಯಬೇಕು.ಆ ಬಳಿಕ ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅನುಮೋದನೆ ಪಡೆಯಬೇಕು. ಆ ನಂತರವೇ ಅನುದಾನ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಬೇಕು.

ಆದರೆ, ಈ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಲ್ಲಿಸಿದ್ದ ಕ್ರಿಯಾ ಯೋಜನೆಯನ್ನು ಈಶ್ವರಪ್ಪ ತಡೆ ಹಿಡಿದಿದ್ದರು. ಯಡಿಯೂರಪ್ಪ ಅವರನ್ನು ಭೇಟಿಮಾಡಿ ಈ ವಿಷಯವನ್ನು ತಿಳಿಸಿದ್ದ ಮರಿಸ್ವಾಮಿ, ಕ್ರಿಯಾ ಯೋಜನೆಗೆ ಅನುಮೋದನೆ ದೊರಕಿಸಿ, ಅನುದಾನ ಒದಗಿಸುವಂತೆ ಒತ್ತಾಯಿಸಿದ್ದರು.

ತಕ್ಷಣವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಡತ ತರಿಸಿಕೊಂಡಿದ್ದ ಮುಖ್ಯಮಂತ್ರಿ, ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದರು. ಅನುದಾನ ಬಿಡುಗಡೆ ಮಾಡಿ, ಕಾಮಗಾರಿಗಳಿಗೆ ಮಂಜೂರಾತಿ ಆದೇಶವನ್ನೂ ಹೊರಡಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದರು. ಆ ಬಳಿಕ ಸಚಿವರ ಗಮನಕ್ಕೆ ತರುವಂತೆಯೂ ಅಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.

‘ತುಂಡು ಗುತ್ತಿಗೆ’ಗೆ ಒಪ್ಪಿಗೆ: ₹ 65 ಕೋಟಿ ಅನುದಾನದಲ್ಲಿ 1,019 ಕಾಮಗಾರಿಗಳನ್ನು ‘ತುಂಡು ಗುತ್ತಿಗೆ’ ಆಧಾರದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದರು. ಅನುದಾನವನ್ನು ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ವಿಭಜಿಸಿ, ಟೆಂಡರ್‌ ನಡೆಸದೇ ನೇರವಾಗಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಲು ಷರತ್ತುಗಳನ್ನು ಸಡಿಲಿಸುವುದಕ್ಕೂ ಯಡಿಯೂರಪ್ಪ ಆದೇಶಿಸಿದ್ದರು.

ಮುಖ್ಯಮಂತ್ರಿ ಆದೇಶದಂತೆ ಕಾಮಗಾರಿಗಳಿಗೆ ಮಂಜೂರಾತಿ ಆದೇಶ ನೀಡಲಾಗಿತ್ತು. ಆ ಬಳಿಕ ವಿವಿಧೆಡೆ ಕಾಮಗಾರಿಗಳಿಗೆ ಚಾಲನೆಯನ್ನೂ ನೀಡಲಾಗಿತ್ತು. ನಂತರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿರುವ ಈಶ್ವರಪ್ಪ, ₹ 65 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಡೆ ಹಿಡಿದಿರುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ಅವರು, ಈ ಪ್ರಕರಣದ ಕುರಿತ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

‘ರಾಜ್ಯದಲ್ಲಿ ಅನೇಕ ಹಿಂದುಳಿದ ಜಿಲ್ಲೆಗಳಿದ್ದರೂ ಆ ಜಿಲ್ಲೆಗೆ ನಯಾಪೈಸೆ ಬಿಡುಗಡೆ ಮಾಡದ ಯಡಿಯೂರಪ್ಪ, ಬೆಂಗಳೂರು ನಗರ ಒಂದೇ ಜಿಲ್ಲೆಗೆ ₹65 ಕೋಟಿ ಕೊಟ್ಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿರುವ ಈಶ್ವರಪ್ಪ, ‘ಅನುಮೋದನೆಗೊಂಡಿರುವ ಬಜೆಟ್ ಅನುದಾನವನ್ನು ಇಲಾಖೆಗೆ ಹಂಚಿಕೆ ಮಾಡಿದ ಮೇಲೆ ಖರ್ಚು ಮಾಡುವುದು ಇಲಾಖೆಯ ಹೊಣೆಗಾರಿಕೆ. ಈ ವಿಷಯದಲ್ಲಿ ಮುಖ್ಯಮಂತ್ರಿ ನಿಯಮ ಮತ್ತು ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ನಾನು ಪ್ರಶ್ನಿಸಿದ್ದೇನೆಯೇ ವಿನಃ ಬಂಡಾಯ ಎದ್ದಿಲ್ಲ’ ಎಂದರು.

Leave a Reply

Your email address will not be published. Required fields are marked *

error: Content is protected !!